ADVERTISEMENT

ಭ್ರಷ್ಟ ವ್ಯವಸ್ಥೆ ಬದಲಿಸಲು ಮನವಿ

ಕಲ್ಲಹಳ್ಳಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ಜೆಡಿಎಸ್‌ ಪ್ರಚಾರ

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:59 IST
Last Updated 6 ಮೇ 2018, 12:59 IST

ಕನಕಪುರ: ‘ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಎಂತಹ ವ್ಯವಸ್ಥೆಯಲ್ಲಿ ಜನ ಬದುಕುತ್ತಿದ್ದಾರೆಂಬುದು ನಿಮಗೆ ಗೊತ್ತಿದೆ, ಈ ಕ್ಷೇತ್ರದ ಶಾಸಕರು ಸರ್ಕಾರದ ಹಣದಲ್ಲಿ ಯಾವ ರೀತಿಯ ಜಾತ್ರೆ ನಡೆಸಿದ್ದಾರೆಂಬುದು ನಿಮಗೆ ಗೊತ್ತಿದೆ. ಇಂತಹ ಭ್ರಷ್ಟವ್ಯವಸ್ಥೆಯನ್ನು ನಾವೆಲ್ಲರೂ ಬದಲಾಯಿಸಬೇಕಿದೆ’ ಎಂದು ಜೆ.ಡಿ.ಎಸ್‌. ಹಿರಿಯ ಮುಖಂಡ ಡಿ.ಎಂ.ವಿಶ್ವನಾಥ್‌ ತಿಳಿಸಿದರು.

ಕಸಬಾ ಹೋಬಳಿ ಕಲ್ಲಹಳ್ಳಿ ದೇವಾಲಯದಲ್ಲಿ ಜೆ.ಡಿ.ಎಸ್‌. ಚುನಾವಣಾ ಪ್ರಚಾರಕ್ಕೆ ಎಲ್ಲ ನಾಯಕರು ಒಗ್ಗೂಡಿ ಪೂಜೆ ನೆರವೇರಿಸಿ ಮಾತನಾಡಿದರು.

‘ನಿಮ್ಮೆಲ್ಲರ ಆಶೀರ್ವಾದದಿಂದ ನಾನೇ ಅಭ್ಯರ್ಥಿಯಾಗಬೇಕಿತ್ತು, ಆದರೆ ಆರ್ಥಿಕ ಪರಿಸ್ಥಿತಿಯಿಂದ ಹಿಂದೆ ಸರಿದಿದ್ದೇನೆ. ಹಾಗೆಂದ ಮಾತ್ರಕ್ಕೆ ಪಕ್ಷದಿಂದ ಹಿಂದೆ ಹೋಗಿಲ್ಲ, ಪಕ್ಷವು ನಾರಾಯಣಗೌಡ ಅವರಿಗೆ ಟಿಕೆಟ್‌ ನೀಡಿದೆ, ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ’ ಎಂದರು.

ADVERTISEMENT

ಇಲ್ಲಿ ನಾರಾಯಣಗೌಡರನ್ನು ಗೆಲ್ಲಿಸುವ ಮೂಲಕ ಕುಮಾರಣ್ಣನ ಕೈ ಬಲಪಡಿಸಲಾಗುವುದು ಎಂದು ಹೇಳಿದರು.

ರಾಜ್ಯದ ಜನತೆ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿ ಅವರ ದುರಾಡಳಿತವನ್ನು ನೋಡಿದ್ದಾರೆ. ಆದರೆ ಬಹುಮತವಿಲ್ಲದಿದ್ದರೂ ಕುಮಾರಣ್ಣ ಸರ್ಕಾರದ 20 ತಿಂಗಳ ಆಡಳಿತದಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳು, ಜನಪರ ಕಾರ್ಯಕ್ರಮಗಳನ್ನು ಜನತೆ ಮರೆತಿಲ್ಲ, ಆ ಕಾರಣದಿಂದಲೇ ರಾಜ್ಯದ ಉದ್ದಗಲಕ್ಕೂ ಕುಮಾರಣ್ಣನನ್ನು ಜನತೆ ಬೆಂಬಲಿಸುತ್ತಿದ್ದಾರೆ ಎಂದರು.

‘ಈ ಬಾರಿಯ ಚುನಾವಣೆಯಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ ಜೆ.ಡಿ.ಎಸ್‌.ಗೆಲ್ಲಿಸುವ ಮತ್ತು ಬೆಂಬಲಿಸುವ ಕೆಲಸ ಮಾಡಿ ಕುಮಾರಣ್ಣನನ್ನು ಮುಖ್ಯಮಂತ್ರಿ ಮಾಡುವ ತವಕದಲ್ಲಿದ್ದಾರೆ. ನಾವು ಈ ಕ್ಷೇತ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕಾಗಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ನಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸೋಣ’ ಎಂದರು.

ನಾರಾಯಣಗೌಡ ಮಾತನಾಡಿ, ‘ಒಂದು ಮತಕ್ಕೆ ₹500 ನೀಡಿದರೆ ₹15 ಕೋಟಿ ಬೇಕು, ಸಾವಿರ ನೀಡಿದರೆ ₹30 ಕೋಟಿ ಬೇಕು. ಒಬ್ಬ ರೈತನ ಮಗನಾಗಿ ಅಂತಹ ಶಕ್ತಿ ನನ್ನಲ್ಲಿ ಇಲ್ಲ. ಒಂದು ದಿನ ₹500 ಅಥವಾ ₹1000 ಹಣ ಪಡೆದು ಮತ ಹಾಕುತ್ತೀರಾ ಇಲ್ಲವೇ 5 ವರ್ಷಗಳ ಉತ್ತಮ ಆಡಳಿತ ನಡೆಸುವ ಜೆ.ಡಿ.ಎಸ್‌. ಪಕ್ಷಕ್ಕೆ ಮತ ನೀಡುತ್ತೀರಾ ನೀವೇ ತೀರ್ಮಾನ ಮಾಡಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ಸಿದ್ದಮರೀಗೌಡ, ದೇವುರಾವ್‌ ಜಾದವ್‌, ನಂಜೇಗೌಡ, ಪೆರುಮಾಳ್‌, ಕಬ್ಬಾಳೇಗೌಡ, ಕೆ.ಜಿ.ಆನಂದ, ಧನಂ ಜಯ,ತುಂಗಣಿ ಪುಟ್ಟಸ್ವಾಮಿ, ಮಲ್ಲಿ ಕಾರ್ಜುನ್‌ ರಾಜಗೋಪಾಲ್‌, ಅಣ್ಣಾನಾಯ್ಕ್‌, ಆರ್‌.ಟಿ.ರಾಜಗೋಪಾಲ್‌, ಸ್ಟುಡಿಯೋ ಚಂದ್ರು, ಕರಿಲಿಂಗೇಗೌಡ, ಚಿನ್ನಸ್ವಾಮಿ, ಬಿ.ಎಸ್‌.ಗೌಡ, ರಾಜಗೋಪಾಲ್‌, ಕುಮಾರ್‌, ಜೈರಾಮ್‌ ಮೊದಲಾದವರು ಉಪಸ್ಥಿತರಿದ್ದರು.

**
ಕುಮಾರಸ್ವಾಮಿ ಅವರು ರೈತರ ಹಾಗೂ ಜನಪರವಾದ ಸರ್ಕಾರವನ್ನು ಈ ಹಿಂದೆ ನೀಡಿದ್ದಾರೆ, ಮುಂದೆಯು ನೀಡುತ್ತಾರೆ. ಅವರ ಪ್ರಣಾಳಿಕೆಯನ್ನು ನೋಡಿದರೆ ನಿಮಗೆ ಅದು ಅರ್ಥವಾಗುತ್ತದೆ
– ನಾರಾಯಣಗೌಡ, ಜೆ.ಡಿ.ಎಸ್‌.ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.