ADVERTISEMENT

‘ಮನುಕುಲದ ಏಳಿಗೆ ಕನಸು ಕಂಡ ಸ್ವಾಮೀಜಿ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:33 IST
Last Updated 3 ಫೆಬ್ರುವರಿ 2017, 7:33 IST
‘ಮನುಕುಲದ ಏಳಿಗೆ ಕನಸು ಕಂಡ ಸ್ವಾಮೀಜಿ’
‘ಮನುಕುಲದ ಏಳಿಗೆ ಕನಸು ಕಂಡ ಸ್ವಾಮೀಜಿ’   

ಮಾಗಡಿ: ಸಮಸ್ತ ಮನುಕುಲದ ಏಳಿಗೆಯನ್ನು ಭವಿಷ್ಯ ಭಾರತದ ಉನ್ನತಿಯಲ್ಲಿ ಕಂಡವರು ಬಾಲಗಂಗಾಧರ ನಾಥ ಸ್ವಾಮಿಗಳು ಎಂದು ಆದಿಚುಂಚನಗಿರಿ ವಿಜಯನಗರ ಶಾಖಾ ಮಠಾಧೀಶ ಸೌಮ್ಯನಾಥ ಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ನಡೆಯುತ್ತಿರುವ  ರಂಗನಾಥ ಸ್ವಾಮಿ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ನಾಡಿನ ಪ್ರಗತಿ ಸಾಧ್ಯ ಎಂದು ನಂಬಿ ಸೇವೆಯಲ್ಲಿ ತೊಡಗಿಸಿದ್ದ ಬಾಲಗಂಗಾಧರನಾಥ ಸ್ವಾಮೀಜಿ ನಾಡಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ್ದರು. ಅವರ ಆಶಯದಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಾಗಡಿಯಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು ಆರಂಭಿಸಲಾಗುವುದು ಎಂದರು.

ಗುರುಗಳ ಮಾತಿನಂತೆ ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಬೇಕು ಎಂದು ಸೌಮ್ಯನಾಥ ಸ್ವಾಮೀಜಿ ತಿಳಿಸಿದರು. ಸಮಾಜಸೇವಕ ಎಚ್‌.ಎಸ್‌ ಸುರೇಂದ್ರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಿ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ  ರಂಗಸ್ವಾಮಿ ಮಾತನಾಡಿ. ಗುರುಹಿರಿಯರ ಮಾರ್ಗದರ್ಶನದಲ್ಲಿ ವಿನಯದಿಂದ ಶ್ರಮಪಟ್ಟು ಕಲಿತ ವಿದ್ಯೆ ಮಾನವಂತರನ್ನು ರೂಪಿಸುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬೆಳಗುಂಬ ನರಸಿಂಹಮೂರ್ತಿ ಮಾತನಾಡಿ, 1974ರಲ್ಲಿ ರಂಗನಾಥ ಸ್ವಾಮಿ ಪ್ರೌಢಶಾಲೆ ಆರಂಭಿಸಿದ ಚುಂಚನಗಿರಿ ಮಠದ ಸ್ವಾಮೀಜಿ ರೈತಾಪಿ ವರ್ಗದ ಪಾಲಿಗೆ ಅನ್ನದಾತರಿದ್ದಂತೆ ಎಂದರು.

ಸಮಾಜಸೇವಕ ಕೊಟ್ಟಣ ಬೀದಿ ಕುಮಾರ ಸ್ವಾಮಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ತಿಳಿಸಿದರು.

ಬಾಲಗಂಗಾಧರ ನಾಥ ಸ್ವಾಮಿ ವಿಜ್ಞಾನ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಕೆ.ಉಮೇಶ್‌, ಪುರಸಭೆ ಸದಸ್ಯ ಕೆ.ವಿ.ಬಾಲು, ಬಗಿನಗೆರೆ ದಾನಿ ಧನಂಜಯ, ಲಾವಣಿ ಕಲಾವಿದ ಚನ್ನಮ್ಮನ ಪಾಳ್ಯದ ನಾಗರಾಜು, ಸಿಆರ್‌ಸಿ ಮುನಿಯಪ್ಪ, ವರ್ತಕ ರಾಜೀವ್‌, ರುದ್ರಪ್ಪ ಮಾತನಾಡಿದರು.
ರಾಮನಗರದ ಅರ್ಚಕರ ಹಳ್ಳಿ ಮಠದ ಅನ್ನದಾನೇಶ್ವರ ಸ್ವಾಮೀಜಿ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿದರು.

ಹೆಬ್ಬಳಲು ವಿಜಯಸಿಂಹ, ಹೇಮಣ್ಣಗೌಡ, ಹನುಮೇಗೌಡ, ಶಿವರಾಜಯ್ಯ, ಲಕ್ಷ್ಮಣ್‌, ಸತೀಶ್‌, ತ್ರಿಪುರ, ಶಶಿರಾಜು, ಲೋಕೇಶ್‌, ಪ್ರೇಮ್‌ಕುಮಾರ್‌, ಜಯರಾಮ್‌ ವೇದಿಕೆಯಲ್ಲಿದ್ದರು. ಶಾಲಾ ಶಿಕ್ಷಕರು ಮಕ್ಕಳು, ಪೋಷಕರು, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು, ಸಿಬ್ಬಂದಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.