ADVERTISEMENT

ಮಹಾದಾಯಿ : ರಾಜ್ಯದ ಸಂಸದರು ರಾಜೀನಾಮೆ ನೀಡಲಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 9:24 IST
Last Updated 29 ಜುಲೈ 2016, 9:24 IST

ಚನ್ನಪಟ್ಟಣ: ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ಅರ್ಜಿ ವಜಾ ತೀರ್ಪನ್ನು ಖಂಡಿಸಿ ಗುರುವಾರ ರೈತಸಂಘದ ಪದಾಧಿಕಾರಿಗಳು ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಎಲ್ಲ ಸಂಸದರು ರಾಜೀನಾಮೆ ನೀಡಬೇಕು. ಕೇಂದ್ರ ಮತ್ತು ಎಲ್ಲ  ರಾಜ್ಯದ ಸರ್ಕಾರಗಳು ರಾಷ್ಟ್ರಮಟ್ಟದ ಜಲನೀತಿಯನ್ನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಎಂ.ರಾಮು, ಕೇಂದ್ರ ಸರ್ಕಾರ ಉತ್ತಮ ಜಲನೀತಿ ರೂಪಿಸುವಲ್ಲಿ ವಿಫಲವಾಗಿದ್ದು, ಕರ್ನಾಟಕದ ಜನತೆಗೆ ಅನ್ಯಾಯ ಮಾಡುತ್ತಿದೆ. ರಾಜ್ಯದ ಸಂಸದರು ರಾಜ್ಯದ ಸಮಸ್ಯೆಗಳ ಬಗ್ಗೆ ದನಿಎತ್ತದ ಕಾರಣ ಇಂದು ನಮಗೆ ಅನ್ಯಾಯವಾಗಿದೆ. ನಮ್ಮ ನೀರನ್ನು ನಾವು ಕುಡಿಯಲು ಬಳಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಬೇಕಾದ ಸಂದರ್ಭ ಎದುರಾಗಿದೆ. ಇದು ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದು ಕಿಡಿಕಾರಿದರು.
ರೈತಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಸಂದರ್ಭದಲ್ಲಿ ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ಎದುರು ಸ್ವಲ್ಪಹೊತ್ತು ಧರಣಿ ನಡೆಸಿ ತಹಶೀಲ್ದಾರ್ ಗೆ ಮನವಿ ನೀಡಿದರು. ರೈತಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಸಿ.ರಾಮಕೃಷ್ಣಯ್ಯ, ಉಪಾಧ್ಯಕ್ಷ ಎ.ಆರ್.ವೆಂಕಟಪ್ಪ, ಕಾರ್ಯದರ್ಶಿ ವಿಜಯ್ ಕುಮಾರ್, ಪದಾಧಿಕಾರಿಗಳಾದ ತಿಮ್ಮೇಗೌಡ, ತಮ್ಮಣ್ಣ, ಕೆ.ಟಿ. ಶಿವಲಿಂಗಯ್ಯ, ವೆಂಕಟಯ್ಯ, ಪುಟ್ಟ ರಾಮಯ್ಯ, ಸಿದ್ದಪ್ಪಾಜಿ, ವೀರ ಮಾದು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.