ADVERTISEMENT

‘ರಾಜಕೀಯ ಕಾರಣಕ್ಕೆ ವಿರೋಧ ಸಲ್ಲ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 8:57 IST
Last Updated 11 ನವೆಂಬರ್ 2017, 8:57 IST

ಮಾಗಡಿ: ಅಪ್ಪಟ ದೇಶಪ್ರೇಮಿ ಟಿಪ್ಪು ಸುಲ್ತಾನ್‌ ಅವರ ಜಯಂತಿಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುವುದು ಸರಿಯಲ್ಲ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು. ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ನಡೆದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಅವರು ಮಾತನಾಡಿದರು.

ಶೃಂಗೇರಿ ಶಾರದಾ ದೇಗುಲದ ಮೇಲೆ ಮರಾಠರು ಆಕ್ರಮಣ ಮಾಡಿದಾಗ ಶಾರದಾ ಪೀಠ ರಕ್ಷಿಸಿದವರು. ನಂಜುಂಡೇಶ್ವರ ಸ್ವಾಮಿಗೆ ಪಚ್ಚೆ ಶಿವಲಿಂಗ ನೀಡಿದ್ದು, ಮೇಲುಕೋಟೆ ಚೆಲುವನಾರಾಯಣ, ಶ್ರೀರಂಗಪಟ್ಟಣದ ರಂಗನಾಥ ದೇಗುಲಗಳಿಗೆ ಕಾಣಿಕೆ ಸಲ್ಲಿಸಿ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಟಿಪ್ಪು ಹೇಗೆ ಹಿಂದೂಗಳ ವಿರೋಧಿಯಾಗಲು ಸಾಧ್ಯ ಎಂದರು.

ರೈತರ ಪರವಾಗಿ ಮೊದಲ ಭಾರಿಗೆ ಭೂಸುಧಾರಣೆ ಜಾರಿಗೆ ತಂದು, ಕೆ.ಆರ್‌.ಎಸ್‌ ಜಲಾಶಯ ಕಟ್ಟಿಸಲು ಉದ್ದೇಶಿಸಿದ್ದ ಟಿಪ್ಪುವನ್ನು ಓಟಿನ ಆಸೆಗಾಗಿ ಹಿಂದೂ ವಿರೋಧಿ ಎಂದು ಬಿಂಬಿಸುವುದನ್ನು ಜನರು ನೋಡುತ್ತಿದ್ದಾರೆ ಎಂದು ತಿಳಿಸಿದರು. ತಾಯಿ ತಂದೆಯ ಹೆಸರಿನಲ್ಲಿ ಪಟ್ಟಣದಲ್ಲಿ ₹15 ಲಕ್ಷ ನೀಡಿ ನಿವೇಶನದ ಖರೀದಿಸಿ ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಶಾದಿಮಹಲ್‌ ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿದೆ ಎಂದರು.

ADVERTISEMENT

ಪ್ರಗತಿಪರ ಚಿಂತಕ ಮಾಡಬಾಳ್‌ ಜಯರಾಮ್‌ ಮಾತನಾಡಿ, ದೇಶಪ್ರೇಮಿ ಟಿಪ್ಪುಸುಲ್ತಾನ್‌ ಬಗ್ಗೆ ಇಲ್ಲ ಸಲ್ಲದ ಸುಳ್ಳು ಹೇಳುತ್ತಿರುವವರು ಚೆರಿತ್ರೆ ಓದಬೇಕು. ಟಿಪ್ಪು ಜಯಂತಿ ಪ್ರಾರಂಭಿಸಿದ್ದೆ ಬಿ.ಎಸ್‌.ಯಡಿಯೂರಪ್ಪ ಎಂಬ ಸತ್ಯ ನಾಡಿನ ಜನತೆಗೆ ತಿಳಿದಿದೆ ಎಂದರು.

‘ಬ್ರಿಟಿಷರನ್ನು ಮನೆಯಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸಿ, ದೇಶದ್ರೋಹ ಬಗೆಯುತ್ತಿದ್ದ ಕೆಲವು ಕೊಡವರನ್ನು ಕೊಲೆ ಮಾಡಿ ಮಾಡಿದ್ದು ತಪ್ಪೇನಲ್ಲ. ಯುದ್ಧದಲ್ಲಿ ರಾಕೆಟ್‌ ಬಳಸಿ, ಹಿಪ್ಪುನೇರಳೆ ಗಿಡ ಬೆಳೆಸಲು ಪ್ರೋತ್ಸಾಹಿಸಿ ರಾಮನಗರವನ್ನು ಸಿಲ್ಕ್‌ಸಿಟಿ ಮಾಡಿರುವ ಟಿಪ್ಪು ಅವರ ಅನನ್ಯ ರಾಷ್ಟ್ರಪ್ರೇಮದ ಬಗ್ಗೆ 4 ಆಣೆ ಕುಂಕುಮ ತಂದು, 400 ಜನರಿಗೆ ಬಳಿದು ಅಮಾಯಕರಿಗೆ ಚೆಡ್ಡಿ ತೊಡಿಸಿ ಬಡಿದಾಡಿಸಿ ಸಾಯಿಸುವವರಿಗೆ ಅರಿವಿಲ್ಲ ಎಂದು ಟೀಕಿಸಿದರು.

ತಹಶೀಲ್ದಾರ್‌ ಎನ್‌.ಕೆ.ಲಕ್ಷ್ಮೀಸಾಗರ್‌ ಮಾತನಾಡಿ, ಟಿಪ್ಪು ಒಬ್ಬ ಶಕ್ತಿಶಾಲಿ ಆಡಳಿತಗಾರ. ಬ್ರಿಟಿಷರ ವಿರುದ್ಧ ಆಕ್ರಮಣಕಾರಿ ಹೋರಾಟ ಮಾಡಿದ ಮಹಾನುಭಾವ. ಜಾತಿ ಧರ್ಮಕ್ಕಿಂತ ಆಡಳಿತಗಾರರ ನೀತಿ ಮುಖ್ಯ ಎಂದರು. ಮುಖಂಡ ಮಹಮದ್‌ ಇನಾಯತ್‌ ಉಲ್ಲಾ ಟಿಪ್ಪುವಿನ ಬಗ್ಗೆ ಮಾತನಾಡಿದರು.

ಜೆಪಿ ಫೌಂಡೇಷನ್‌ ಅಧ್ಯಕ್ಷ ಚಂದ್ರೇಗೌಡ, ತಾಪಂ ಅಧ್ಯಕ್ಷ ಕೆ.ಎಚ್‌.ಶಿವರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌.ಮಂಜುನಾಥ, ಪುರಸಭೆ ಅಧ್ಯಕ್ಷೆ ಹೊಂಬಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹನುಮಂತರಾಯಪ್ಪ, ಸುರೇಶ್‌,ಪುರಸಭೆ ಸದಸ್ಯರಾದ ಶಿವಶಂಕರ್‌, ಬಸವರಾಜು, ಎಂ.ನಾಗೇಂದ್ರ, ರಿಯಾಜ್‌ ಅಹಮದ್‌, ಪಹಿಮುನ್ನಿಸಾ, ಹಾಜಿರಾಭಾನು, ಅಖಿಲಾಭಾನು, ಬೆಸ್ಕಾಂ ನಿವೃತ್ತ ಅಧಿಕಾರಿ ರಹಮತ್‌ ಉಲ್ಲಾಖಾನ್‌, ಎಂ.ಡಿ,ಅಲ್ಲಾಭಕಸ್‌, ಡಿವೈಎಸ್‌ಪಿ ಪುರುಷೋತ್ತಮ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಶಬರೀಶ್‌, ಪುರಸಭೆ ಮುಖ್ಯಾಧಿಕಾರಿ ಎ.ಶಿವಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನರಸಿಂಹಮೂರ್ತಿ, ಅಬ್ದುಲ್‌ ಜಾವಿದ್‌, ಮುಖಂಡರಾದ ಕುದೂರಿನ ಬಾಲರಾಜು, ಮಂಜೇಶ್‌, ಚಂದ್ರಶೇಖರ್‌, ಸಬ್‌ಇನ್‌ಪೆಕ್ಟರ್‌ಗಳಾದ ರವಿ, ಶಂಕರ್‌ ನಾಯ್ಕ್‌,ಹಳೆಮಸೀದಿ, ಹೊಸಮಸೀದಿ ಮೊಹಲ್ಲಾದ ಮುಖಂಡರು ಇದ್ದರು. ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಬಿಇಒ ರೂಪಾಕ್ಷ ಸ್ವಾಗತಿಸಿದರು. ಎನ್‌. ನರಸಿಂಹ ಮೂರ್ತಿ ವಂದಿಸಿದರು. ಶಿಕ್ಷಕ ಬಿ.ಎನ್‌.ಜಯರಾಮು ನಿರೂಪಿಸಿದರು.,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.