ADVERTISEMENT

ರೈತನ ಬದುಕು ಬದಲಿಸಿದ ಹಸಿರು ಮೇವು: ಎರಡು ಎಕರೆಯಲ್ಲೇ ಲಕ್ಷ ರೂಪಾಯಿ ಆದಾಯ

ಆರ್.ಜಿತೇಂದ್ರ
Published 8 ಏಪ್ರಿಲ್ 2017, 6:31 IST
Last Updated 8 ಏಪ್ರಿಲ್ 2017, 6:31 IST
ತಾವು ಬೆಳೆದ ಜೋಳದೊಂದಿಗೆ ರೈತ ಕೃಷ್ಣಪ್ಪ
ತಾವು ಬೆಳೆದ ಜೋಳದೊಂದಿಗೆ ರೈತ ಕೃಷ್ಣಪ್ಪ   

ಕೂಟಗಲ್‌ (ರಾಮನಗರ): ಈ ಬಾರಿ ಬರಗಾಲ ಸಾವಿರಾರು ರೈತರ ಬದುಕಿಗೆ ಬರೆ ಎಳೆದಿದೆ. ಆದರೆ ಕೂಟಗಲ್‌ನ ಕೃಷ್ಣಪ್ಪ ಮಾತ್ರ ಅದನ್ನೇ ಸವಾಲಾಗಿ ಸ್ವೀಕರಿಸಿ ಹಸಿರು ಮೇವು ಬೆಳೆದು ಲಕ್ಷ ರೂಪಾಯಿಗಳಷ್ಟು ಆದಾಯ ಕಂಡಿದ್ದಾರೆ.

ಕೂಟಗಲ್ ಗ್ರಾಮದ ಹೊರವಲಯದಲ್ಲಿ ಗುತ್ತಿಗೆ ಪಡೆದ ಎರಡು ಎಕರೆ ಜಮೀನಿನಲ್ಲಿ ಅವರು ಮುಸುಕಿನ ಜೋಳ ಬೆಳೆದಿದ್ದು, ಈಗಾಗಲೇ ಪೂರ್ತಿ ಬೆಳೆ ಮಾರಾಟವಾಗಿ ಹೋಗಿದೆ. ಜೋಳದ ಸಾಲುಗಳ ಲೆಕ್ಕದಲ್ಲಿ ಮಾರಾಟ ನಡೆದಿದ್ದು, ಮುಂಗಡವಾಗಿ ಮೇವು ಕಾಯ್ದಿರಿಸಿರುವ ರೈತರು ತಮಗೆ ಬೇಕಾದಷ್ಟು ಹಸಿರು ಮೇವು ಕಟಾವು ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. 8–10 ಅಡಿ ಎತ್ತರಕ್ಕೆ ಮೇವು ಬೆಳೆದು ನಿಂತಿದೆ. ಹೀಗೆ ಎರಡು ಎಕರೆ ಮೇವು ಬರೋಬ್ಬರಿ ₹1.5 ಲಕ್ಷದಷ್ಟು ಮೊತ್ತಕ್ಕೆ ಮಾರಾಟ ಕಂಡು ಅಚ್ಚರಿ ಮೂಡಿಸಿದೆ.

ಫಲ ನೀಡಿದ ಪ್ರಯತ್ನ: ಸ್ವಗ್ರಾಮ ಕೂಟಗಲ್‌ನಲ್ಲಿ ಕೆಲವು ವರ್ಷ ಕಾಲ ಹೋಟೆಲ್ ಇಟ್ಟು ಬದುಕು ಸಾಗಿಸುತ್ತಿದ್ದ ಕೃಷ್ಣಪ್ಪ ಮುಂದೆ ಕೃಷಿಯಲ್ಲಿಯೇ ಬದುಕು ಕಂಡುಕೊಳ್ಳುವ ಕನಸು ಹೊತ್ತರು. ಅಲ್ಲಲ್ಲಿ ಜಮೀನು ಗುತ್ತಿಗೆ ಪಡೆದು ವ್ಯವಸಾಯ ಶುರು ಮಾಡಿಕೊಂಡರು. ಆದರೆ ಈ ದಾರಿ ಹೂವಿನ ಹಾಸಿಗೆಯಾಗಿ ಇರಲಿಲ್ಲ. ಕಲ್ಲಂಗಡಿ ಬೆಳೆಯಲು ಹೊರಟು ₹40 ಸಾವಿರದಷ್ಟು ಸಾಲ ಹೊತ್ತುಕೊಳ್ಳಬೇಕಾಯಿತು. ಈ ಬಾರಿಯ ಮುಂಗಾರಿನಲ್ಲಿ ಮಳೆ ನೆಚ್ಚಿಕೊಂಡು ನೆಲಗಡಲೆ ಬೆಳೆದಿದ್ದು, ಅದು ನೆಲಕಚ್ಚಿದ ಪರಿಣಾಮ ಹತಾಶರಾಗಬೇಕಾಯಿತು. ಕಡೆಗ ಪ್ರಯತ್ನ ಎಂಬಂತೆ ನಾಲ್ಕು ತಿಂಗಳ ಹಿಂದೆ ಮುಸುಕಿನ ಜೋಳ ಬೆಳೆಯಲು ನಿರ್ಧರಿಸಿದರು. ಆ ನಿರ್ಧಾರವೇ ಇಂದು ಉತ್ತಮ ಬದುಕು ರೂಪಿಸಿ ಕೊಡುತ್ತಿದೆ.

ADVERTISEMENT

‘ಎರಡು ಎಕರೆಯಷ್ಟು ಜಮೀನನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಂಡು ಮೊದಲಿಗೆ ಒಂದು ಎಕರೆ ಹೊಲದಲ್ಲಿ ಜೋಳ ಬಿತ್ತನೆ ಮಾಡಿದೆ. ಸಾಮಾನ್ಯ ವ್ಯವಸಾಯ ಪದ್ಧತಿಯಂತೆ ನೆಲಕ್ಕೆ ಬೀಜ ಚೆಲ್ಲಿ ಸುಮ್ಮನಾಗದೇ ಸಾಲಾಗಿ ಒಂದೊಂದೇ ಕಾಳು ಬಿತ್ತನೆ ಮಾಡಿ ನೀರು ಹಾಯಿಸುತ್ತಾ ಬಂದಿದೆ. ಅದಾದ ಒಂದು ತಿಂಗಳಲ್ಲಿ ಮತ್ತೊಂದು ಎಕರೆಗೆ ಇದೇ ರೀತಿ ಬೀಜ ಬಿತ್ತಿದೆ. ಕಾಲಕಾಲಕ್ಕೆ ಕೂಲಿಯಾಳುಗಳ ಮೂಲಕ ಅದರ ನಿರ್ವಹಣೆಯ ಜೊತೆಗೆ ಗೊಬ್ಬರ ಹಾಕಿದೆ. ನೋಡುತ್ತಿದ್ದಂತೆ ಬೆಳೆ ಆಳೆತ್ತರಕ್ಕೆ ಬೆಳೆದು ಎಲ್ಲರ ಗಮನ ಸೆಳೆಯಿತು. ವ್ಯಾಪಾರವೂ ಕುದುರಿತು’ ಎಂದು ವಿವರಿಸುತ್ತಾರೆ ಕೃಷ್ಣಪ್ಪ.

ಟ್ಯಾಂಕರ್‌ ನೀರು ಪೂರೈಕೆ: ಕೃಷ್ಣಪ್ಪ ಅವರು ಗುತ್ತಿಗೆ ಪಡೆದ ಜಮೀನು ಕಣ್ವಾ ಹೊಳೆಯ ಪಕ್ಕದಲ್ಲಿ ಇದ್ದು, ಅದಕ್ಕೆ ಹೊಂದಿಕೊಂಡಂತೆ ಕೊರೆದ ಕೊಳವೆ ಬಾವಿ ನೀರನ್ನು ಜೋಳ ಬೆಳೆಯಲು ಬಳಸಿಕೊಳ್ಳಲಾಗುತಿತ್ತು. ಆದರೆ ಅಂತರ್ಜಲ ಕುಸಿತದ ಪರಿಣಾಮ ವಾರಗಳ ಹಿಂದೆ ನೀರು ಬರಿದಾಯಿತು. ಹೇಗಾದರೂ ಬೆಳೆ ಉಳಿಸಿಕೊಳ್ಳಬೇಕು ಎಂಬ ಹಟಕ್ಕೆ ಬಿದ್ದ ಈ ರೈತ ಸಮೀಪದಲ್ಲಿ ನೀರಿನ ಗುಂಡಿ ತೋಡಿಸಿ, ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಹರಿಸಿ ಅದನ್ನು ಬೆಳೆಗೆ ಉಣಿಸಿದರು. ಹೀಗಾಗಿ ಬಿರು ಬಿಸಿಲಿನಲ್ಲೂ ಜೋಳ ಹುಲುಸಾಗಿ ಬೆಳೆಯಲು ಸಾಧ್ಯವಾಯಿತು.

‘ಬೆಸ್ಕಾಂನವರು ಕೊಡುವ ಒಂದೆರಡು ಗಂಟೆ ವಿದ್ಯುತ್‌ನಲ್ಲೇ ಹೊಲಕ್ಕೆ ನೀರು ಕಟ್ಟಿದ್ದೇನೆ. ಮನೆಯವರ ಸಹಕಾರದೊಂದಿಗೆ ರಾತ್ರಿ ಹೊತ್ತೂ ನೀರು ಹಾಯಿಸಿ ಜೋಳ ಕಾಪಾಡಿ
ಕೊಂಡಿದ್ದೇನೆ. ಕಡೆಗೆ ಟ್ಯಾಂಕರ್‌ಗೆ ₹450ರಂತೆ ನಾಲ್ಕಾರು ಬಾರಿ ಬಾಡಿಗೆಗೆ ನೀರು ತರಿಸಿಕೊಂಡಿದ್ದೇನೆ. ಅದೆಲ್ಲದರ ಫಲ ಇಂದು ಕೈಸೇರಿದೆ’ ಎಂದು ಸಂತೋಷದಿಂದ ಅವರು ಹೇಳುತ್ತಾರೆ.

‘ಎರಡು ಎಕರೆಗೆ ಒಟ್ಟು 7 ಬ್ಯಾಗ್‌ನಷ್ಟು ಬಿತ್ತನೆ ಬೀಜ ಬಳಸಿದ್ದು, ಪ್ರತಿ ಬ್ಯಾಗ್‌ಗೆ ₹ 1150 ಕೊಟ್ಟು ತಂದಿದ್ದೆ. ಈ ನಡುವೆ ಉಳುಮೆ, ಕೂಲಿಯಾಳು, ಗೊಬ್ಬರ ಹಾಗೂ ಕಡೆಗೆ ಟ್ಯಾಂಕರ್‌ ನೀರಿಗಾಗಿ ಸಾವಿರಾರು ರೂಪಾಯಿ ವೆಚ್ಚವಾಗಿದೆ. ಇದೆಲ್ಲ ಕಳೆದರೂ ಲಕ್ಷ ರೂಪಾಯಿ ಆದಾಯಕ್ಕೆ ಮೋಸವಿಲ್ಲ’ ಎಂದು ಅವರು ನಗೆ ಚೆಲ್ಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.