ADVERTISEMENT

ವಿಮೆ ಹಣ ಕೊಡಿಸುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:17 IST
Last Updated 12 ಜನವರಿ 2017, 10:17 IST
ರಾಮನಗರ: ವಿಮಾ ಕಂತು ಅವಧಿ ಪೂರ್ಣಗೊಂಡರೂ, ಕಟ್ಟಿದ ಹಣ ಹಿಂತಿರುಗಿಸದೆ ಸತಾಯಿಸುತ್ತಿರುವ ಏಜೆಂಟರ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮಾಂತರ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಕೆಂಜಿಗರಹಳ್ಳಿಯ ಅಂಧ ವ್ಯಕ್ತಿ ರಮೇಶ್ ಎಂಬುವರು ಡಿವೈಎಸ್‍ಪಿ ಎಂ.ಕೆ.ತಮ್ಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
 
‘ಬಿಡದಿ ಹೋಬಳಿಯ ಬೈರಮಂಗಲ ಗ್ರಾಮದ ವ್ಯಕ್ತಿಯೊಬ್ಬರು ಖಾಸಗಿ ವಿಮಾ ಸಂಸ್ಥೆಯೊಂದರ ಪಾಲಿಸಿ ನೀಡಿ ಕಳೆದ ಆರು ವರ್ಷಗಳಿಂದ ಪ್ರತಿ ತಿಂಗಳು ₹ 550 ಕಂತು ಕಟ್ಟಿಸಿಕೊಂಡಿದ್ದಾರೆ. ಕಂತುಗಳು ಪೂರ್ಣಗೊಂಡ ನಂತರ ನನಗೆ ಸೇರಬೇಕಾದ ಹಣ ನೀಡಬೇಕೆಂದು ಕೋರಿದರೆ ನಿನ್ನ ಹಣ ಯಾವುದೂ ಇಲ್ಲ. ನಿನಗೆ ಏನೂ ಕೊಡಬೇಕಾಗಿಲ್ಲ ಎನ್ನುತ್ತಿದ್ದಾರೆ’ ಎಂದು ಅವರು ದೂರಿದರು.
 
‘ಈ ಬಗ್ಗೆ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ, ವಿಮಾ ಕಂತು ಮರಳಿ ನೀಡಲು ವಿಫಲನಾದ ವ್ಯಕ್ತಿಯ ಜತೆ ರಾಜೀ ಸಂಧಾನಕ್ಕೆ ಒತ್ತಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಪೂರ್ಣ ಪ್ರಮಾಣದ ವಿಮಾ ಕಂತು ಮತ್ತು ಈ ಹಣಕ್ಕೆ ಸಂಸ್ಥೆ ನೀಡಬೇಕಾದ ಹೆಚ್ಚುವರಿ ಹಣ ಒಟ್ಟುಗೂಡಿಸಿ ಕೊಡಿಸುವಂತೆ ಡಿವೈಎಸ್‍ಪಿ ಅವರಲ್ಲಿ ಮನವಿ ಮಾಡಿದರು.
 
ಗ್ರಾಮಾಂತರ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದ ಡಿವೈಎಸ್‍ಪಿ ತಮ್ಮಯ್ಯ ಅವರು ತಕ್ಷಣ ಸಮಸ್ಯೆ ಬಗೆಹರಿಸುವಂತೆ ಮತ್ತು ರಮೇಶ್ ಅವರಿಗೆ ಸಲ್ಲಬೇಕಾದ ಹಣ ಕೊಡಿಸುವಂತೆ ಸೂಚಿಸಿದರು.
 
ಕರ್ನಾಟಕ ವಿಶೇಷಚೇತನರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜೆ. ಮಂಜುನಾಥ್‌, ಪದಾಧಿಕಾರಿ ನಾಗರಾಜ್‌ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.