ADVERTISEMENT

ವೇತನ ಹೆಚ್ಚಳಕ್ಕೆ ಪ್ರಸ್ತಾವ: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:49 IST
Last Updated 16 ಮೇ 2017, 6:49 IST
ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯಲ್ಲಿ ಸೋಮವಾರ ಕಾನ್‌ಸ್ಟೆಬಲ್‌ಗಳಿಗಾಗಿ ಆರಂಭವಾದ ಪುನರ್‌ಮನನ ಶಿಬಿರವನ್ನು ಗೃಹ ಸಚಿವ ಜಿ. ಪರಮೇಶ್ವರ್‌ ಉದ್ಘಾಟಿಸಿದರು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಡಿಜಿ ಐಜಿಪಿ ಆರ್‌.ಕೆ. ದತ್ತಾ, ಐಜಿಪಿಗಳಾದ ಐಜಿಪಿಗಳಾದ ಪ್ರೇಮ್‌ಶಂಕರ್ ಮೀನ, ಬಿ.ಕೆ. ಸಿಂಗ್‌, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್‌ ಇದ್ದಾರೆ
ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯಲ್ಲಿ ಸೋಮವಾರ ಕಾನ್‌ಸ್ಟೆಬಲ್‌ಗಳಿಗಾಗಿ ಆರಂಭವಾದ ಪುನರ್‌ಮನನ ಶಿಬಿರವನ್ನು ಗೃಹ ಸಚಿವ ಜಿ. ಪರಮೇಶ್ವರ್‌ ಉದ್ಘಾಟಿಸಿದರು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಡಿಜಿ ಐಜಿಪಿ ಆರ್‌.ಕೆ. ದತ್ತಾ, ಐಜಿಪಿಗಳಾದ ಐಜಿಪಿಗಳಾದ ಪ್ರೇಮ್‌ಶಂಕರ್ ಮೀನ, ಬಿ.ಕೆ. ಸಿಂಗ್‌, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್‌ ಇದ್ದಾರೆ   

ರಾಮನಗರ: ‘ಪೊಲೀಸರ ವೇತನ ಹೆಚ್ಚಳ ಸಂಬಂಧ ಈಗಾಗಲೇ ಗೃಹ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಿದೆ. ಅವರು ಅದನ್ನು ಏಳನೇ ವೇತನ ಆಯೋಗದ ಮುಂದೆ ಇಡಲಿದ್ದು, ಈ ವರ್ಷದಲ್ಲಿಯೇ ಉತ್ತಮ ಪ್ರಕಟಣೆ ಹೊರಡಿಸುವ  ನಿರೀಕ್ಷೆ ಇದೆ’ ಎಂದು ಗೃಹ ಸಚಿವ  ಜಿ. ಪರಮೇಶ್ವರ್‌ ಹೇಳಿದರು.

ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಸೋಮವಾರ ಬೆಂಗಳೂರು ನಗರ, ಕೇಂದ್ರ ವಲಯ ಹಾಗೂ ದಕ್ಷಿಣ ವಲಯ ವ್ಯಾಪ್ತಿಯ 450 ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳಿಗಾಗಿ ಆಯೋಜಿಸಿದ್ದ ಎರಡು ವಾರಗಳ ಪುನರ್‌ಮನನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈಚಿನ ದಿನಗಳಲ್ಲಿ ಸೈಬರ್ ಕ್ರೈಂ ನಂತಹ ಹೊಸ ಬಗೆಯ ಅಪರಾಧಗಳು ಹೆಚ್ಚೆಚ್ಚು ಪತ್ತೆಯಾಗುತ್ತಿವೆ. ಈಚೆಗಷ್ಟೇ ಬಿಟ್‌ಕಾನ್‌ ವ್ಯವಸ್ಥೆಯ ಮೂಲಕ ವಿಪ್ರೊ ಸಂಸ್ಥೆಗೆ ₹ 500 ಕೋಟಿ ನೀಡುವಂತೆ ಬೆದರಿಕೆ ಕರೆ ಬಂದಿತ್ತು. ಇಂತಹವುಗಳ ಬಗ್ಗೆ ಅರಿಯದೇ ಹೋದರೆ ಪೊಲೀಸರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಆಗದು. ಈಚಿನ ದಿನಗಳಲ್ಲಿ ಕೆಲವು ಕಾಯ್ದೆ, ಕಾನೂನುನಲ್ಲೂ ತಿದ್ದುಪಡಿ ಆಗಿದ್ದು, ಅವುಗಳನ್ನೂ ಅರಿಯಬೇಕಿದೆ’ ಎಂದು ಅವರು ಹೇಳಿದರು.

ADVERTISEMENT

5 ವರ್ಷಕ್ಕೊಮ್ಮೆ ಶಿಬಿರ: ಸದ್ಯ 5 ಕನಿಷ್ಠ ವರ್ಷ ಸೇವಾ ಅವಧಿ ಪೂರೈಸಿದ ತಳ ಹಂತದ ಸಿಬ್ಬಂದಿಯನ್ನು ಕಾರ್ಯಾ ಗಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರತಿ ಸಿಬ್ಬಂದಿಗೂ ಕನಿಷ್ಠ 5 ವರ್ಷಕ್ಕೆ ಒಮ್ಮೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ’ ಎಂದು ಅವರು  ಅಭಿಪ್ರಾಯ ಪಟ್ಟರು. ‘ಈಗಾಗಲೇ 11 ಸಾವಿರ ಸಿಬ್ಬಂದಿಗೆ ಸೇವಾ ಬಡ್ತಿ ನೀಡಿದ್ದು, ಇನ್ನು ಮುಂದೆ 5–10 ವರ್ಷಕ್ಕೆ ಒಮ್ಮೆ ಬಡ್ತಿ ಸಿಗಲಿದೆ’ ಎಂದು ಭರವಸೆ ನೀಡಿದರು.

ಸಿಬ್ಬಂದಿ ಕೊರತೆ ಇಲ್ಲ: ರಾಜ್ಯದಲ್ಲಿ ಪ್ರಸ್ತುತ 1.07 ಲಕ್ಷ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಐದು ವರ್ಷದಲ್ಲಿ ಈ ಸಂಖ್ಯೆಯು 1.7 ಲಕ್ಷಕ್ಕೆ ಮುಟ್ಟಲಿದೆ. ನಮ್ಮಲ್ಲಿ ಪ್ರತಿ 800 ಜನಕ್ಕೆ ಒಬ್ಬರು ಪೊಲೀಸರು ಲಭ್ಯವಾಗ ಲಿದ್ದಾರೆ’ ಎಂದು ಅವರು ವಿವರಿಸಿದರು.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮಾತನಾಡಿ ಪೊಲೀಸರು ಆತ್ಮವಿಶ್ವಾಸ, ಮನೋಸ್ಥೈರ್ಯ ಮೈಗೂಡಿಸಿ ಕೊಳ್ಳುವಂತೆ ತಿಳಿಸಿದರು.

ಡಿ.ಜಿ. ಐಜಿಪಿ ಆರ್.ಕೆ. ದತ್ತಾ ಮಾತನಾಡಿ ‘ಇಲಾಖೆಯಲ್ಲಿ ಶೇ 90ರಷ್ಟು ಮಂದಿ ಕಾನ್‌ಸ್ಟೆಬಲ್‌ಗಳೇ ಆಗಿದ್ದಾರೆ. ಇವರು ಇನ್ನಷ್ಟು ಕ್ರಿಯಾಶೀಲರಾಗಬೇಕು. ಸಣ್ಣ–ಪುಟ್ಟ ಪ್ರಕರಣಗಳ ತನಿಖೆಯನ್ನು ತಾವೇ ನಿರ್ವಹಿಸುವ  ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ತರಬೇತಿ ವಿಭಾಗದ ಐಜಿಪಿಗಳಾದ ಪ್ರೇಮ್‌ಶಂಕರ್ ಮೀನ, ಬಿ.ಕೆ. ಸಿಂಗ್‌, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್‌, ತರಬೇತಿ ಶಾಲೆಯ ಪ್ರಾಚಾರ್ಯ ಇಂದುಶೇಖರ್‌ ಇದ್ದರು.

**

ಬೀಟ್ ವ್ಯವಸ್ಥೆ ಜಾರಿ
‘ಏಪ್ರಿಲ್‌ 1ರಿಂದ ರಾಜ್ಯ ದಾದ್ಯಂತ ಬೀಟ್‌ ವ್ಯವಸ್ಥೆ ಜಾರಿಗೊಳಿ ಸಲಾಗಿದ್ದು, ಜನಸ್ನೇಹಿ ವ್ಯವಸ್ಥೆ ತರಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ಲಭ್ಯವಿರುವ ಎಲ್ಲ ಅಂಕಿ–ಅಂಶಗಳನ್ನು ಪೊಲೀಸ್ ಠಾಣೆಗಳೊಂದಿಗೆ ಹಂಚಿ ಕೊಳ್ಳುವ ವ್ಯವಸ್ಥೆ ತರಲಾಗುತ್ತಿದೆ. ಬೆಂಗಳೂರಿನಲ್ಲಿ ಡಯಲ್‌ 100 ಕರೆಗೆ 15 ಸೆಕೆಂಡುಗಳ ಒಳಗೆ ಉತ್ತರಿಸಿ ದೂರನ್ನು ಸಂಬಂಧಿಸಿದ ಸಿಬ್ಬಂದಿಗೆ ತ್ವರಿತವಾಗಿ ಮುಟ್ಟಿಸುವ ವ್ಯವಸ್ಥೆಯು ಶೀಘ್ರ ಜಾರಿಗೆ ಬರಲಿದೆ’ ಎಂದು ಸಚಿವ ಈ ಸಂದರ್ಭದಲ್ಲಿ ಅವರು ಪರಮೇಶ್ವರ್ ತಿಳಿಸಿದರು.

**

ಈಗಾಗಲೇ 23 ಸಾವಿರ ಪೊಲೀಸರನ್ನು ಸರ್ಕಾರ ನೇಮಿಸಿ ಕೊಂಡಿದ್ದು, ಮುಂದಿನ ಎರಡು ವರ್ಷದಲ್ಲಿ ಇನ್ನೂ 16 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
–ಜಿ. ಪರಮೇಶ್ವರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.