ADVERTISEMENT

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ಗಣರಾಜ್ಯೋತ್ಸವದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 10:10 IST
Last Updated 27 ಜನವರಿ 2017, 10:10 IST
ಮಾಗಡಿ ತಾಲ್ಲೂಕಿನ  ತಿಪ್ಪಗೊಂಡನಹಳ್ಳಿ ಚಿತ್ರಕೂಟ ಕಾಲೇಜಿನಲ್ಲಿ  ಗಣರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕಲೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ಇಸ್ರೊ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಯೋಜನಾ (ನೀತಿ) ಆಯೋಗದ ಸದಸ್ಯ ಡಾ.ಕೆ.ಕಸ್ತೂರಿ ರಂಗನ್ ವೀಕ್ಷಿಸಿದರು
ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಚಿತ್ರಕೂಟ ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕಲೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ಇಸ್ರೊ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಯೋಜನಾ (ನೀತಿ) ಆಯೋಗದ ಸದಸ್ಯ ಡಾ.ಕೆ.ಕಸ್ತೂರಿ ರಂಗನ್ ವೀಕ್ಷಿಸಿದರು   

ಮಾಗಡಿ:  ವಿದ್ಯಾರ್ಥಿಗಳಲ್ಲಿ ವಿಜ್ಞಾನದ ವಿಷಯಗಳನ್ನು ತಿಳಿಸುವ ಮೂಲಕ ವೈಜ್ಞಾನಿಕ ಮನೋಭಾವನೆ ಬೆಳೆಸಿ, ಭಾರತವನ್ನು ಮೂಢನಂಬಿಕೆ ರಹಿತ ದೇಶವನ್ನಾಗಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ‘ಇಸ್ರೊ’ ಮಾಜಿ ಅಧ್ಯಕ್ಷ ಹಾಗೂ ಯೋಜನಾ (ನೀತಿ) ಆಯೋಗದ ಸದಸ್ಯ ಡಾ.ಕೆ. ಕಸ್ತೂರಿ ರಂಗನ್ ಕರೆ ನೀಡಿದರು.

ತಿಪ್ಪಗೊಂಡನಹಳ್ಳಿಯಲ್ಲಿ ಚಿತ್ರಕೂಟ ಕಾಲೇಜಿನಲ್ಲಿ 68ನೇ ಗಣರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕಲೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಬ್ಬ ಸಾಧಕನಿರುತ್ತಾನೆ. ಸಾಧನೆಗೆ ಅವಕಾಶ ದೊರಕಿಸಿಕೊಡಬೇಕು. ಸಿಕ್ಕಿರುವ  ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು  ಎಂದ ಡಾ,ಕಸ್ತೂರಿ ರಂಗನ್‌, ಗ್ರಾಮೀಣ ಭಾಗದ ಕಾಲೇಜಿನಲ್ಲಿ ಕಂಪ್ಯೂಟರ್ ಮತ್ತು ಸಮಗ್ರ ವಿಜ್ಞಾನ ಪ್ರಯೋಗಾಲಯ ಹಾಗೂ ಕ್ರೀಡಾ ಸೌಲಭ್ಯ ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಪರ್ಕ ರಸ್ತೆ ದುರಸ್ಥಿಗೆ ಆಗ್ರಹ: ಚಿತ್ರಕೂಟ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ತಿಪ್ಪಗೊಂಡನಹಳ್ಳಿ ಬಸ್ ನಿಲ್ದಾಣದಿಂದ ಚಿತ್ರಕೂಟ ಕಾಲೇಜಿನ ಸಂಪರ್ಕ ರಸ್ತೆ ತೀರ ಹದಗೆಟ್ಟಿದೆ ಎಂದರು.

ಚಿತ್ರಕೂಟ ಕಾಲೇಜಿನ ಸಂಸ್ಥಾಪಕ ಕೃಷ್ಣಾನಂದ ಚಂದಾವರ್ಕರ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಗೆ ಬೆಳವಣಿಗೆ ದೃಷ್ಟಿಯಿಂದ ಇಲ್ಲೊಂದು ಉತ್ತಮ ಶಾಲಾ ಕಾಲೇಜು ಪ್ರಾರಂಭಿಸಲಾಗಿದೆ. ಗ್ರಾಮೀಣ ಮಕ್ಕಳಲ್ಲಿ  ವಿಶೇಷ ಪ್ರತಿಭೆ ಅಡಗಿದೆ ಎಂದು ಶ್ಲಾಘಿಸಿದರು.
ಚಿತ್ರಕೂಟ ಕಾಲೇಜಿನ ಪ್ರಾಂಶುಪಾಲ ಮುರಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.