ADVERTISEMENT

‘ಶೋಷಿತರ ಪಾಲಿನ ಸೂರ್ಯ ಅಂಬೇಡ್ಕರ್’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:10 IST
Last Updated 15 ಏಪ್ರಿಲ್ 2017, 9:10 IST

ಚನ್ನಗಿರಿ: ‘ಶತಮಾನಗಳಿಂದ ತುಳಿತಕ್ಕೆ ಒಳಗಾದ ದಲಿತ ಸಮುದಾಯವನ್ನು ಮೇಲಕ್ಕೆತ್ತಲು ಶ್ರಮಿಸಿದ ಡಾ.ಅಂಬೇಡ್ಕರ್ ದಲಿತರ ಪಾಲಿನ ಸೂರ್ಯ. ಈ ಸಮುದಾಯಕ್ಕೆ ನ್ಯಾಯ ದೊರಸಿಕೊಡಲು ಹಗಲಿರುಳು ಶ್ರಮಿಸಿದ ಮಹಾನ್‌ ಚೇತನ ಬಾಬಾಸಾಹೇಬ್‌ ಅಂಬೇಡ್ಕರ್‌’ ಎಂದು ಶಾಸಕ ವಡ್ನಾಳ್‌ ರಾಜಣ್ಣ ಹೇಳಿದರು.

ಪಟ್ಟಣದ ಬಾಬೂ ಜಗಜೀವನರಾಂ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಂ ಅವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಲ್ಕು ವರ್ಷದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ₹ 70 ಸಾವಿರ ಕೋಟಿ ಅನುದಾನ ನೀಡಿದ ಏಕೈಕ ಸರ್ಕಾರ ನಮ್ಮದು. ಈ ವರ್ಷದಿಂದ ಪರಿಶಿಷ್ಟ ಜಾತಿಯ ಬಡ ಜನರು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡರೆ ಸರ್ಕಾರ ಅವರಿಗೆ
₹ 1.75 ಲಕ್ಷ ಅನುದಾನ ನೀಡಲಿದೆ’ ಎಂದರು.

ADVERTISEMENT

‘ಶಿಕ್ಷಣದಿಂದಲೇ ದೇಶದ ಹಾಗೂ ಸಮಾಜದ ಪ್ರಗತಿ ಸಾಧ್ಯ. ಆದ್ದರಿಂದ ಮೊದಲು ಶಿಕ್ಷಣ ಪಡೆದುಕೊಳ್ಳುವತ್ತ ಗಮನಹರಿಸಬೇಕು. ಹಾಗೆಯೇ ಅಧಿಕಾರಿ ವರ್ಗದವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹರಿಗೆ ಮುಟ್ಟಿಸುವಂತಹ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಎಸ್‌.ಪದ್ಮಕುಮಾರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಂ.ಎನ್.ಪುಷ್ಪವತಿ, ಉಪಾಧ್ಯಕ್ಷ ಎಚ್. ಹಾಲೇಶ್‌ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಟಿ.ವಿ.ರಾಜು, ಎಪಿಎಂಸಿ ಅಧ್ಯಕ್ಷ ಎಂ.ಬಿ.ರಾಜಪ್ಪ, ಪುರಸಭೆ ಅಧ್ಯಕ್ಷ ಬಿ.ಆರ್.ಹಾಲೇಶ್, ಮುಖ್ಯಾಧಿಕಾರಿ ಎನ್.ನಾಗೇಂದ್ರಪ್ಪ, ಸಿಪಿಐ ಆರ್.ಆರ್.ಪಾಟೀಲ್, ಪಿಎಸ್ಐ ವೀರಬಸಪ್ಪ ಕುಸಲಾಪುರ, ತಾಲ್ಲೂಕು ಪಂಚಾಯ್ತಿ ಇಒ ಜಿ.ಎನ್.ಕುಮಾರ್, ಬಿಇಒ ಜಯ್ಯಣ್ಣ, ವೀರೇಶ್‌ ನಾಯ್ಕ, ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.