ADVERTISEMENT

ಸಂಪೂರ್ಣ ಜಿಲ್ಲೆ ಬರಪೀಡಿತ ಘೋಷಿಸಲು ಒತ್ತಾಯ

ಸರ್ಕಾರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಆಗ್ರಹ: ಶೀಘ್ರ ಕಂದಾಯ, ಕೃಷಿ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 11:03 IST
Last Updated 9 ಅಕ್ಟೋಬರ್ 2015, 11:03 IST
ರಾಮನಗರದ  ಜಾನಪದ ಲೋಕದಲ್ಲಿ ಕೃಷಿ ಭೂಮಿ ಸಂಚಿಕೆ ಮತ್ತು ಜನಮುಖಿ ಟ್ರಸ್ಟ್‌ ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ‘ಕೃಷಿ ಅಭಿವೃದ್ಧಿ ಕಾರ್ಯಾಗಾರ’ವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎ.ಇಕ್ಬಾಲ್‌ ಹುಸೇನ್‌, ಜಿಲ್ಲಾಧಿಕಾರಿ ಎಫ್‌.ಆರ್‌. ಜಮಾದಾರ್‌ ಉದ್ಘಾಟಿಸಿದರು
ರಾಮನಗರದ ಜಾನಪದ ಲೋಕದಲ್ಲಿ ಕೃಷಿ ಭೂಮಿ ಸಂಚಿಕೆ ಮತ್ತು ಜನಮುಖಿ ಟ್ರಸ್ಟ್‌ ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ‘ಕೃಷಿ ಅಭಿವೃದ್ಧಿ ಕಾರ್ಯಾಗಾರ’ವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎ.ಇಕ್ಬಾಲ್‌ ಹುಸೇನ್‌, ಜಿಲ್ಲಾಧಿಕಾರಿ ಎಫ್‌.ಆರ್‌. ಜಮಾದಾರ್‌ ಉದ್ಘಾಟಿಸಿದರು   

ರಾಮನಗರ: ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿಯೂ ಬರದ ವಾತಾವರಣ ಇದ್ದರೂ ಸರ್ಕಾರ ಕೇವಲ ಕನಕಪುರ ತಾಲ್ಲೂಕನ್ನು ಮಾತ್ರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಉಳಿದ ಮೂರು ತಾಲ್ಲೂಕುಗಳನ್ನು ಬರ ಪ್ರದೇಶ ಎಂದು ಘೋಷಿಸುವಂತೆ ಜಿಲ್ಲಾ ಪಂಚಾಯಿತಿ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಜಿ.ಪಂ ಅಧ್ಯಕ್ಷ  ಎಚ್‌.ಎ.ಇಕ್ಬಾಲ್‌ ಹುಸೇನ್‌ ತಿಳಿಸಿದರು.

ನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ಕೃಷಿ ಭೂಮಿ ಸಂಚಿಕೆ ಮತ್ತು ಜನಮುಖಿ ಟ್ರಸ್ಟ್‌ ಗುರುವಾರ ಹಮ್ಮಿಕೊಂಡಿದ್ದ ‘ಕೃಷಿ ಅಭಿವೃದ್ಧಿ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಮೂರು ತಾಲ್ಲೂಕುಗಳನ್ನೂ ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕೃಷಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವುದಾಗಿ ಅವರು ತಿಳಿಸಿದರು.

ಪರಿಹಾರ ಹೆಚ್ಚಿಸಿ: ಸಾಲದ ಸುಳಿಯಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ ನಾಲ್ಕು ಐದು ಜನರಿಗೆ ಮಾತ್ರ ತಲಾ ₹ 2 ಲಕ್ಷ ಪರಿಹಾರವನ್ನು ಸರ್ಕಾರ ವಿತರಿಸಿದೆ. ಈ ಪರಿಹಾರದ ಮೊತ್ತವು ಆ ಕುಟುಂಬದ ಆರ್ಥಿಕ ಸಂಕಷ್ಟ ಪರಿಹರಿಸುವುದಿಲ್ಲ. ಆದ್ದರಿಂದ ಪರಿಹಾರದ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಸರ್ಕಾರಿ ಯೋಜನೆಗಳನ್ನು ರೈತರಿಗೆ ತಲುಪಿಸಲು ಅಧಿಕಾರಿಗಳು, ಸಿಬ್ಬಂದಿವರ್ಗ ವಿಫಲರಾಗಿದ್ದಾರೆ ಎಂದು ಅವರು ಕಿಡಿಕಾರಿದರು.

ಜಿಲ್ಲಾಧಿಕಾರಿ ಮನವಿ: ಗುಡುಗು, ಸಿಡಿಲು, ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಹೊಲ, ಗದ್ದೆಗಳಲ್ಲಿ ದುಡಿಮೆ ಮಾಡುವ ರೈತರು   ಸಾಲಕ್ಕೆ ಹೆದರಿ ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ದುರಂತವೇ ಸರಿ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಮನವಿ ಮಾಡಿದರು.

ಹುಟ್ಟಿದವರು ಸಾಯಲೇ ಬೇಕು ನಿಜ. ಆದರೆ, ಕೃತಕವಾಗಿ ಸಾವನ್ನು ತಂದುಕೊಳ್ಳುವುದು ಪಾಪದ ಕೆಲಸ. ವಿಶೇಷವಾಗಿ ರಾಮನಗರ ಜಿಲ್ಲಾಡಳಿತವು ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಆತ್ಮಹತ್ಯೆಗೂ ಮುನ್ನ ರೈತರು ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಕೊಂಚ ಚಿಂತಿಸಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನಿ ಡಾ.ವಾಸು, ಹೈನುಗಾರಿಕೆ ತಜ್ಞ ಡಾ.ನಾಗೇಶ್, ವಿಷಯ ತಜ್ಞ ಮಂಜುನಾಥ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಬಿ.ರಾಮಮೂರ್ತಿ, ಕೆಎಂಎಫ್ ವ್ಯವಸ್ಥಾಪಕ ಡಾ.ಶಿವಶಂಕರ್ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ರೈತ ಸಂಘದ ಮುಖಂಡ ಸಂಪತ್ ಕುಮಾರ್, ಕೃಷಿ ಭೂಮಿ ಸಂಚಿಕೆಯ ಕುಮಾರ ರೈತ, ಕುಂಬಾಪುರ ಬಾಬು, ಶಿವಕುಮಾರ್ ಭಾಗವಹಿಸಿದ್ದರು.

***
ಸರ್ಕಾರಿ ಯೋಜನೆಗಳನ್ನು ರೈತರಿಗೆ ತಲುಪಿಸಲು ಅಧಿಕಾರಿಗಳು, ಸಿಬ್ಬಂದಿವರ್ಗ ವಿಫಲರಾಗಿದ್ದಾರೆ.
-ಇಕ್ಬಾಲ್‌ ಹುಸೇನ್‌,
ಜಿ.ಪಂ. ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT