ADVERTISEMENT

ಸಂಸ್ಕೃತ ಪಂಡಿತರ ಕುಟುಂಬಕ್ಕೆ ಸೌಲಭ್ಯ– ಮನವಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 5:00 IST
Last Updated 13 ಏಪ್ರಿಲ್ 2017, 5:00 IST

ಮಾಗಡಿ: ಕಡು ಬಡತನದಲ್ಲಿ ಜೀವಿಸುತ್ತಿರುವ ಮಾಗಡಿಯ ವಿದ್ವಜ್ಜನ ಸಂಸ್ಕೃತ ಪಂಡಿತೋತ್ತಮರ ಕುಟುಂಬಗಳಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಿ ಮಾಗಡಿ ಸೀಮೆಯ ಸಾಂಸ್ಕೃತಿಕ ವೈಭವ ಮುಂದುವರೆಸಬೇಕು ಎಂದು ಸಿರಭೂವಲಯ ಕೃತಿಯ ಕರ್ತೃ ದಿವಂಗತ ಕರ್ಲಮಂಗಲಂ ಶ್ರೀಕಂಠಯ್ಯ ಅವರ ಮೊಮ್ಮಗ ಹಾಗೂ ಸಂಸ್ಕೃತ ವಿದ್ವಾಂಸ ಕರ್ಲಮಂಗಲಂ ಎಸ್‌.ನಾಗೇಂದ್ರ ಪ್ರಸಾದ್‌ ತಿಳಿಸಿದರು.

ಮಾಗಡಿ ರಂಗ ಟ್ರಸ್ಟ್‌ ವತಿಯಿಂದ ರಾಮಮಂದಿರದಲ್ಲಿ ಮಂಗಳವಾರ ನಡೆದ ಬಡಗನಾಡು ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ರಾಷ್ಟ್ರಪತಿ ಡಾ.ಬಾಬೂ ರಾಜೇಂದ್ರ ಪ್ರಸಾದ್‌ ಅವರ ಒಡನಾಡಿಯಾಗಿದ್ದ ಬಹುಭಾಷಾ ವಿದ್ವಾಂಸ ಕರ್ಲಮಂಗಲಂ ಶ್ರೀಕಂಠಯ್ಯ ಅವರ ಸಾಧನೆಯನ್ನು ಮರೆತಿರುವುದು ಸರಿಯಲ ಎಂದರು.

ಮಾಗಡಿ ರಂಗ ಟ್ರಸ್ಟ್‌ ಅಧ್ಯಕ್ಷ ಗೋಪಾಲಕೃಷ್ಣ  ಮಾತನಾಡಿ ಮಕ್ಕಳಿಗೆ ಮಾಗಡಿ ಸೀಮೆಯ ಚಾರಿತ್ರಿಕ, ಸಾಹಿತ್ಯ, ಕಲೆ, ಜನಪದ , ಗಿಡಮೂಲಿಕೆ, ಪಶುಪಾಲನೆ ಬಗ್ಗೆ ತಿಳಿಸುವ ಅಗತ್ಯವಿದೆ ಎಂದರು. 

ಟ್ರಸ್ಟಿನ  ಕಾರ್ಯದರ್ಶಿ ಕರ್ಲಮಂಗಲಂ ಬಾಲಕೃಷ್ಣ, ಧರ್ಮದರ್ಶಿ ಕರ್ಲಮಂಗಲಂ ಮೋಹನ್‌ ಕುಮಾರ್‌, ಎಂ.ಎಸ್‌.ರವಿರಾವ್‌, ರಾಮಮಂದಿರದ ಅಧ್ಯಕ್ಷ ಎಸ್‌.ಎಲ್‌.ಎನ್‌,ಪ್ರಸಾದ್‌, ಹಿರಿಯ ವಕೀಲ ಟಿ.ಕೆ.ಹಿರಿಯಣ್ಣ, ಅಗಲಕೋಟೆ  ಬೊಂಬೆ ತಜ್ಞ ಎ.ಆರ್‌.ಸತ್ಯನಾರಾಯಣ. ಲೇಖಕ ಚಕ್ರಬಾವಿಯ ಸುಧೀಂದ್ರ ರಾವ್‌, ವಸಂತ ಕೃಷ್ಣ , ಸಮಾಜಸೇವಕ ಕುಮಾರಸ್ವಾಮಿ ಇದ್ದರು.

ಬ್ರಾಹ್ಮಣ ಅನ್ನಸಂತರ್ಪಣೆ ನಡೆಯಿತು. ಶಿವ.ಎಂ.ಕೆ., ರಾಜಶೇಖರ್‌ .ಬಿ.ಎ, ಸಹನ.ಆರ್‌. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ರಾಮ ಮಂದಿರದಲ್ಲಿನ ಹಿಂದೂಧರ್ಮ ಪ್ರತಿಷ್ಠಾಪನಾಚಾರ್ಯ ಭಗವತ್‌ ಆದಿಗುರು ಶಂಕರಾಚಾರ್ಯರ ವಿಗ್ರಹ, ರಾಮಚಂದ್ರ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅರ್ಚಕ ಶೃಂಗೇರಿ ರಾಮಚಂದ್ರ ಭಟ್‌ ಪೂಜೆ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.