ADVERTISEMENT

‘ಸಮಾಜದ ಡೊಂಕು ತಿದ್ದುವ ಪತ್ರಿಕೆಗಳು’

ಪತ್ರಿಕಾ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:41 IST
Last Updated 5 ಡಿಸೆಂಬರ್ 2016, 9:41 IST

ಕನಕಪುರ:  ಪತ್ರಿಕೆಗಳು ಜನತೆಯ ವಿಶ್ವ ವಿದ್ಯಾಲಯಗಳಿದ್ದಂತೆ, ಜನರ ತಪ್ಪು ಒಪ್ಪುಗಳನ್ನು, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿವೆ ಎಂದು ತಾಲ್ಲೂಕಿನ ಮರಳೇಗವಿ ಮಠದ ಡಾ. ಮುಮ್ಮಡಿ ಶಿವರುದ್ರ ಮಹಾಸ್ವಾಮಿ ಹೇಳಿದರು.

ನಗರದ ರೋಟರಿ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜದ ಒಳಿತಿಗಾಗಿ ಕೆಲಸ ಮಾಡದ ಮಂದ ಅಧಿಕಾರಿಗಳ ತಪ್ಪುಗಳನ್ನು ಬಯಲಿಗೆಳೆದು ಸಮಾಜ ಶುದ್ಧೀಕರಣಕ್ಕೆ ಪತ್ರಿಕೆಗಳು ಪ್ರಯತ್ನಿಸಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಎ. ಇಕ್ಬಾಲ್‌ಹುಸೇನ್‌ ಮಾತನಾಡಿ, ರಾಜಕೀಯ ಇಂದು ಕೀಳು ಮಟ್ಟ ತಲುಪುತ್ತಿದೆ, ಸಮಾಜ ಮತ್ತು ರಾಜಕೀಯವನ್ನು ತಿದ್ದಿ ತೀಡುವ ಕೆಲಸ ಪತ್ರಕರ್ತರಿಂದ ಆಗಬೇಕಿದೆ ಎಂದರು.

ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್‌ ಉಪನ್ಯಾಸ ನೀಡಿ ಮಾತನಾಡಿ, ಪತ್ರಿಕೆಗಳು ಮತ್ತು ಪತ್ರಕರ್ತರು ವರದಿಗಳನ್ನು ಮಾಡುವಾಗ ವಸ್ತುನಿಷ್ಠೆ ತೋರಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌ ಮಾತನಾಡಿ, ಪತ್ರಕರ್ತರಿಗೆ ತಾಲ್ಲೂಕು ಕೇಂದ್ರದಲ್ಲಿ ಒಂದು ವ್ಯವಸ್ಥಿತವಾದ ಕಚೇರಿಯಿಲ್ಲವೆಂದು ಮನವಿ ಮಾಡಿದ್ದು ಮುಂದಿನ ದಿನಗಳಲ್ಲಿ ಒಂದು ಕಚೇರಿಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಎಚ್‌.ಪ್ರಕಾಶ್‌, ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಆರೋಗ್ಯ ವಿಮೆ ಸಿಗುವಂತೆ ಆಯಾ ಪತ್ರಿಕೆಗಳು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಕೆ.ಕಬ್ಬಾಳಯ್ಯ ಮಾತನಾಡಿ, ಜಿಲ್ಲಾ ಮತ್ತು ರಾಜ್ಯ ಸಂಘವು ತಾಲ್ಲೂಕು ಪತ್ರಕರ್ತರಿಗೆ ಸಾರಿಗೆ ಪಾಸ್‌, ಆರೋಗ್ಯ ವಿಮೆ ಮತ್ತಿತರ ಸವಲತ್ತುಗಳು ದೊರಕುವಂತೆ ಮಾಡಬೇಕೆಂದು ಮನವಿ ಮಾಡಿದರು.

ಡಾಕ್ಟರೇಟ್‌ ಪಡೆದ ಮುಮ್ಮಡಿ ಶಿವರುದ್ರಮಹಾಸ್ವಾಮಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಿಕ್ಕಮರೀಗೌಡ, ತಾಲ್ಲೂಕಿನ ಹಿರಿಯ ಪತ್ರಕರ್ತರಾದ ಬೂದಿಗುಪ್ಪೆ ಲಿಂಗೇಗೌಡ, ನೀಲ ಮೇಘ ಶಾಮ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.