ADVERTISEMENT

ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸಲು ಸಲಹೆ

ಕಡಿಮೆ ಖರ್ಚು, ಹೆಚ್ಚು ಆದಾಯ ಎನ್ನುವುದೇ ನಿಸರ್ಗಾಧಾರಿತ ಕೃಷಿ ತತ್ವ: ಉಪನ್ಯಾಸಕ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 10:57 IST
Last Updated 9 ಅಕ್ಟೋಬರ್ 2015, 10:57 IST

ಚನ್ನಪಟ್ಟಣ: ಸಾಲಬಾಧೆಗೆ ಕಾರಣವಾಗಿರುವ ಅಧುನಿಕ ಬೇಸಾಯ ಕ್ರಮವನ್ನು ತ್ಯಜಿಸಿ ಸ್ವಾವಲಂಬನೆಗೆ ಸಹಾಯಕವಾಗಿರುವ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ರೈತ ಸಮುದಾಯ ಅನುಸರಿಸುವುದು ಸೂಕ್ತ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಕೊತ್ತೀಪುರ ಜಿ.ಶಿವಣ್ಣ ತಿಳಿಸಿದರು.

ಕೆಂಗಲ್ ಶ್ರೀಹೊಂಬೇಗೌಡ ಐಟಿಐ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ಸಾವಯವ ಕೃಷಿ ಮತ್ತು ನೀರಿನ ಸದ್ಬಳಕೆ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡಿಮೆ ಖರ್ಚು, ಹೆಚ್ಚು ಆದಾಯ ಎನ್ನುವುದು ನಿಸರ್ಗಾಧಾರಿತ ಕೃಷಿಯ ತತ್ವವಾಗಿತ್ತು. ಹಿಡಿ ಧಾನ್ಯ ಬಿತ್ತಿ ರಾಶಿ ಬೆಳೆಯುತ್ತಿದ್ದ ರೈತ ಇಂದು ಭಾರಿ ಬಂಡವಾಳ ಹೂಡಿ ಶೂನ್ಯ ಲಾಭದ, ಇಲ್ಲವೇ ಬಂಡವಾಳ ನಷ್ಟ ಮಾಡಿಕೊಳ್ಳುವಂತಾಗಿರುವುದು ಆಧುನಿಕ ಕೃಷಿಯ ಅವಾಂತರವಾಗಿದೆ ಎಂದರು.

1966ರಿಂದೀಚೆಗೆ ಕೃಷಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ, ಯಾಂತ್ರೀಕೃತ ಕೃಷಿ, ಹೈಬ್ರಿಡ್ ಬೀಜಗಳ ಬಿತ್ತನೆ, ಕೊಳವೆ ಬಾವಿಗಳ ನೀರಾವರಿ, ಏಕಬೆಳೆ ಪದ್ಧತಿ, ಕುಲಾಂತರಿ ತಳಿಗಳ ಬಳಕೆ ಇವೆಲ್ಲಾ ವೈಜ್ಞಾನಿಕ ಕೃಷಿಯ ಅಗತ್ಯತೆಗಳಾಗಿವೆ. ಇವೆಲ್ಲಕ್ಕೂ ಒಂದಕ್ಕೊಂದು ಸಂಬಂಧವಿದ್ದು ಒಂದಿಲ್ಲದಿದ್ದರೆ ಮತ್ತೊಂದು ನಿಷ್ಪ್ರಯೋಜಕವಾಗುತ್ತದೆ ಎಂದು ಅವರು ತಿಳಿಸಿದರು.

ಬಂಡವಾಳವಿಲ್ಲದ ಬಡರೈತರು ಅಧಿಕ ಲಾಭ ಸಂಪಾದಿಸುವ ಭ್ರಮೆಗೆ ಒಳಗಾಗಿ ಸಾಲಸೋಲ ಮಾಡಿ ಆಧುನಿಕ ಕೃಷಿಯಲ್ಲಿ ತೊಡಗಿಕೊಂಡು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ ಹತಾಶೆಗೆ ಒಳಗಾಗಿದ್ದಾರೆ. ಇದರ ಬಗ್ಗೆ ರೈತ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದರು.

ಪರಿಸರ ಪ್ರೇಮಿ ಮುಕುಂದರಾವ್ ಲೋಕಂಡೆ ಮಾತನಾಡಿ, ಬೆಟ್ಟಗುಡ್ಡ ಪ್ರದೇಶದಲ್ಲಿ ಗಿಡ ಮರ ನೆಡುವ ಮೂಲಕ ಜಾಗತಿಕ ತಾಪಮಾನ ತಡೆಯಲು ಯುವಜನರು ಮುಂದಾಗಬೇಕು. ಜಾಗತಿಕ ತಾಪಮಾನದ ಏರಿಕೆಯಿಂದ ಮಳೆಯ ಕೊರತೆಯಾಗಿದ್ದು, ಬರಗಾಲ ಮತ್ತೆ ಮತ್ತೆ ಸಂಭವಿಸುತ್ತಿದೆ. ಕೆರೆ ಕಟ್ಟೆಗಳು ಬರಿದಾಗುತ್ತಿದ್ದು ಪ್ರಾಣಿ ಪಕ್ಷಿಗಳು ಕುಡಿಯಲು ನೀರಿಲ್ಲದ ಪರಿಸ್ಥಿತಿ ಏರ್ಪಟ್ಟಿದೆ ಎಂದ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಕೆ.ಎಸ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ವಿ.ಪಿ.ವರದರಾಜು ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುವೆಂಪು ಪದವಿ ಕಾಲೆೇಜಿನ ಪ್ರಾಂಶುಪಾಲ ಕೆ.ಶಿವಲಿಂಗಪ್ಪ, ಕಸಾಪ ಕಾರ್ಯದರ್ಶಿ ಸಿ.ರಾಜಶೇಖರ್, ಗಾಯಕ ಚೌ.ಪು.ಸ್ವಾಮಿ, ಉಪನ್ಯಾಸಕ ಡಿ.ಪಿ.ಶಂಕರಲಿಂಗೇಗೌಡ ಮತ್ತಿತರರು ಭಾಗವಹಿಸಿದ್ದರು.

***
ಬೆಳೆದ ಉತ್ಪನ್ನವನ್ನು ಸೂಕ್ತ ಮಾರುಕಟ್ಟೆ ಮಾರಾಟ ಮಾಡಿ ಲಾಭಗಳಿಸುವ ಚಾಕಚಕ್ಯತೆ ಇವ್ಯಾವು ನಮ್ಮ ರೈತರಲ್ಲಿಲ್ಲ.
-ಜಿ. ಶಿವಣ್ಣ,
ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.