ADVERTISEMENT

‘ಸಾಮಾಜಿಕ ಸಮಾನತೆ, ಹೊಸ ಮೌಲ್ಯದ ಪ್ರತಿಪಾದಕ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 9:27 IST
Last Updated 12 ಸೆಪ್ಟೆಂಬರ್ 2017, 9:27 IST
ಮಾಗಡಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿದರು
ಮಾಗಡಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿದರು   

ಮಾಗಡಿ: ಜಾತಿಯ ತಾರತಮ್ಯವನ್ನು ತಿರಸ್ಕರಿಸಿ, ಆಧ್ಯಾತ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆ ಹಾಗೂ ಹೊಸಮೌಲ್ಯಗಳನ್ನು ಉತ್ತೇಜಿಸಿದ ಭಾರತದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

ತಾಲ್ಲೂಕು ಆರ್ಯ ಈಡಿಗರ ಸಂಘದ ವತಿಯಿಂದ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಗುಲ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳ ಸ್ಥಾಪನೆಯ ಮೂಲಕ ದೀನರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೇಲುಗೈ ಅಗತ್ಯವನ್ನು ಒತ್ತಿ ಹೇಳಿದ ಮಹಾನುಭಾವರು ಎಂದರು.

ಧರ್ಮದ ಹೊರತಾಗಿ ಎಲ್ಲರೂ ದೇವರನ್ನು ಅರಿತುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಸತ್ಯ, ಕರ್ತವ್ಯ, ಕರುಣೆ ಪ್ರೀತಿ ಎಂಬ ಪದಗಳನ್ನು ಬಹಿರಂಗಪಡಿಸಿದ ಪ್ರಕಾಶಮಾನವಾದ ಬೆಳಕು ನಾರಾಯಣ ಗುರುಗಳು.

ADVERTISEMENT

ಅವರ ಮಾನವೀಯತೆ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ಕಾರದ ವತಿಯಿಂದ ರಂಗನಾಥ ಸ್ವಾಮಿ ಅರವಟಿಗೆ ಜೀರ್ಣೋದ್ದಾರಕ್ಕೆ ಎಲ್ಲಾ ಸಮುದಾಯಗಳಿಗೆ ಅನುದಾನ ಕೊಡಿಸಿದ್ದೇನೆ, ಹಿಂದುಳಿದ ವರ್ಗಗಳವರು ಸಂಘಟಿತರಾಗಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ನಮ್ಮ ಹಕ್ಕನ್ನು ಪಡೆಯಲು ಮುಂದಾಗಬೇಕು ಎಂದು ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

ನಾರಾಯಣ ಗುರುಗಳು ನಿಜವಾದ ಕರ್ಮಯೋಗಿ,ಅವರ ಜೀವನವನ್ನು ದಮನಿತರ ಸುಧಾರಣೆಗಾಗಿ ಸಮರ್ಪಿಸಿಕೊಂಡಿದ್ದರು ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ,ಗೋಪಾಲ್‌, ಕಾರ್ಯದರ್ಶಿ ಆರ್‌,ಚಂದ್ರಶೇಖರ್‌, ಮೋಹನ್‌ ಕುಮಾರ್‌, ಆರ್‌.ರೇಣುಕ, ಬಸವರಾಜು, ರಾಘವೇಂದ್ರ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳ ಬಗ್ಗೆ ಮಾತನಾಡಿದರು. ರಂಗಲಕ್ಷ್ಮೀ ಗೋಪಾಲ್‌,ರಜನಿವೆಂಕಟೇಶ್‌,ಲೀಲಾಪುರುಷೋತ್ತಮ್‌ ಹಾಗೂ ಆರ್ಯ ಈಡಿಗ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.