ADVERTISEMENT

ಸೊಪ್ಪು ಕಡಿದವರ ವಿರುದ್ಧ ಗಂಧದ ಮರ ಕಳ್ಳತನ ಆರೋಪ– ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 7:09 IST
Last Updated 2 ಮಾರ್ಚ್ 2017, 7:09 IST
ಕನಕಪುರ ಉಯ್ಯಂಬಳ್ಳಿ ಹೋಬಳಿ ಹೂಳ್ಯ ಹೊಸದೊಡ್ಡಿ ಗ್ರಾಮದ ಇರುಳಿಗರನ್ನು ಬಂಧಿಸಿರುವುದನ್ನು ವಿರೋಧಿಸಿ ಹಲಗೂರು ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು
ಕನಕಪುರ ಉಯ್ಯಂಬಳ್ಳಿ ಹೋಬಳಿ ಹೂಳ್ಯ ಹೊಸದೊಡ್ಡಿ ಗ್ರಾಮದ ಇರುಳಿಗರನ್ನು ಬಂಧಿಸಿರುವುದನ್ನು ವಿರೋಧಿಸಿ ಹಲಗೂರು ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು   

ಕನಕಪುರ:  ಅರಣ್ಯ ಪ್ರದೇಶದಲ್ಲಿ ಮೇಕೆಗಳಿಗೆ ಸೊಪ್ಪು ಕಡಿಯಲು ಹೋಗಿದ್ದ ಅಮಾಯಕ ಜನರನ್ನು ಗಂಧದ ಮರ ಕಡಿಯುತ್ತಿದ್ದರೆಂದು ಆರೋಪಿಸಿ ಬಂಧಿಸಿದ್ದಾರೆ ಎಂದು ಆಕ್ಷೇಪಿಸಿ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಹೂಳ್ಯ ಹೊಸದೊಡ್ಡಿ ಗ್ರಾಮದ ಜನತೆ ಹಲಗೂರು ಅರಣ್ಯ ಕಚೇರಿಯ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಪಿಡ್ಡಯ್ಯ, ಶಿವಮಾದು ಮತ್ತು ಶಿವಣ್ಣ ಎಂಬುವರು ಶನಿವಾರ ಅರಣ್ಯದಲ್ಲಿ ಮೇಕೆಗಳಿಗೆ ಸೊಪ್ಪು ಕಡಿಯುತ್ತಿದ್ದಾಗ ಏಕಾಏಕಿ ಬಂದ ಅರಣ್ಯ ರಕ್ಷಕರು ಅವರನ್ನು ಹಿಡಿದು ‘ಗಂಧದ ಮರಗಳನ್ನು ಕಡಿಯುತ್ತೀರಿ’ ಎಂದು ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದರು. 

‘ಕಾಡಿನಲ್ಲಿ ಹಿಂದೆ ಯಾರೋ ಗಂಧದ ಮರಗಳನ್ನು ಕಡಿದು ಲೂಟಿ ಮಾಡಿದ್ದಾರೆ, ನಿಜವಾದ ಕಳ್ಳರನ್ನು ಹಿಡಿಯಲಾಗದ ಅರಣ್ಯಾಧಿಕಾರಿಗಳು ಉನ್ನತಾಧಿಕಾರಿಗಳ ಒತ್ತಡದಿಂದ ತಪ್ಪಿಸಿಕೊಳ್ಳಲು ಅಮಾಯಕರನ್ನು ಹಿಡಿದು ಸುಳ್ಳು ಪ್ರಕರಣ ಹಾಕಿ ಜೈಲಿಗೆ ಹಾಕಿದ್ದಾರೆ. ನಿಜವಾದ ತಪ್ಪಿತಸ್ಥರನ್ನು ಹಿಡಿಯಲಿ, ಏನೂ ಗೊತ್ತಿಲ್ಲದ ನಮ್ಮವರನ್ನು ಬಿಡಬೇಕೆಂದು ಒತ್ತಾಯಿಸಿದರು.

ಅರಣ್ಯಕ್ಕೆ ಹೊಂದಿಕೊಂಡಂತೆ ನಮ್ಮ ಜಮೀನುಗಳು ಇರುವುದರಿಂದ ಅಲ್ಲಿಗೆ ಹೋಗಲು ಹಲಗೂರು ಅರಣ್ಯಾಧಿಕಾರಿ ಬಿಡುತ್ತಿಲ್ಲ. ಅಲ್ಲಿಂದ ಒಕ್ಕಲೆಬ್ಬಿಸುವ ಷಡ್ಯಂತ್ರದಿಂದ ಇಂತಹ ಸುಳ್ಳು ಪ್ರಕರಣ ದಾಖಲಿಸಲಾಗಿದೆ, ಇದೊಂದು ವ್ಯವಸ್ಥಿತ ಪಿತೂರಿ. ಅಮಾಯಕರ ಮೇಲೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆಂದು ಕಿಡಿಕಾರಿದರು.

ಜೈಲು ಪಾಲಾದವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಅರಣ್ಯಾಧಿಕಾರಿ ವಿರುದ್ಧ ಕಾನೂನಿನ ಹೋರಾಟ ನಡೆಸಲಾಗುವುದು ಎಂದು ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ  ಏಳಗಳ್ಳಿ ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.