ADVERTISEMENT

ಸ್ತ್ರೀಯರ ಮೇಲಿನ ದೌರ್ಜನ್ಯ ತಡೆಗೆ ತಾಕೀತು

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 7:18 IST
Last Updated 1 ಮಾರ್ಚ್ 2017, 7:18 IST
ರಾಮನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ (ಎಡದಿಂದ ಎರಡನೆಯವರು) ಮಾತನಾಡಿದರು.
ರಾಮನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ (ಎಡದಿಂದ ಎರಡನೆಯವರು) ಮಾತನಾಡಿದರು.   

ರಾಮನಗರ: ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಹಾಗೂ ಬಹುಪತ್ನಿತ್ವ ಪ್ರಕರಣಗಳು ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಮಂಗಳವಾರ ನಡೆದ ‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು’ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 2016–17ನೇ ಸಾಲಿನಲ್ಲಿ 132 ಕೌಟುಂಬಿಕ ದೌರ್ಜನ್ಯ, 93 ವರದಕ್ಷಿಣೆ ಹಾಗೂ 55 ಬಹುಪತ್ನಿತ್ವ ಪ್ರಕರಣಗಳು ದಾಖಲಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವುಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದು ಆತಂಕಕಾರಿ ಸಂಗತಿ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಮಾಗಡಿ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದರು.

ಮಹಿಳೆಯನ್ನು ಗೌರವದಿಂದ ಕಾಣಿ: ‘ಪೊಲೀಸ್‌ ಠಾಣೆಗೆ ಬರುವ ಮಹಿಳೆಯರ ಪೈಕಿ ಬಹುತೇಕರು ದೂರು ನೀಡಲು ಹಿಂಜರಿಯುತ್ತಾರೆ’ ಎಂಬ ಪೊಲೀಸ್ ಅಧಿಕಾರಿ ರಘುಕುಮಾರ್ ಹೇಳಿಕೆಗೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು. ‘ಠಾಣೆಗೆ ಬರುವ ಮಹಿಳೆಯರನ್ನು ಸತಾಯಿಸಲಾಗುತ್ತಿದೆ ಎಂಬ ದೂರುಗಳಿವೆ. ಅಲ್ಲಿಗೆ ಬರುವ ಸ್ತ್ರೀಯರನ್ನು ಮೊದಲು ಗೌರವದಿಂದ ಕಾಣಿ. ಅವರಿಗೆ ಸಾಂತ್ವನ ಹೇಳುವ ಜೊತೆಗೆ ಸಮಾಲೋಚನೆ ನಡೆಸಿ ಸಮಸ್ಯೆ ಅರಿಯಿರಿ. ಅಗತ್ಯ ಬಿದ್ದರಷ್ಟೇ ದೂರು ದಾಖಲಿಸಿ’ ಎಂದು ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರೇವಣೇಶ್ ಮಾತನಾಡಿ ನಾಲ್ಕೂ ತಾಲ್ಲೂಕುಗಳಲ್ಲಿ ದಾಖಲಾದ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ‘ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನೀಡುವ ಸಲುವಾಗಿ ಪ್ರತಿ ತಾಲ್ಲೂಕು ಕೇಂದ್ರದಲ್ಲೂ ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ವೈದ್ಯಕೀಯ ನೆರವು, ಕಾನೂನು ಸಲಹೆ ಹಾಗೂ ಅಗತ್ಯಬಿದ್ದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣಯ್ಯ ಮಾಹಿತಿ ನೀಡಿ ‘ಜಿಲ್ಲೆಯಲ್ಲಿ ಒಟ್ಟು 11 ಗಾರ್ಮೆಂಟ್‌ ಕಾರ್ಖಾನೆಗಳಿವೆ. ಇಲ್ಲಿ 5,720 ಮಹಿಳಾ ಕಾರ್ಮಿಕರಿದ್ದಾರೆ. ಬಹುತೇಕರಿಗೆ ಕಾರ್ಖಾನೆಗಳು ಉತ್ತಮ ವ್ಯವಸ್ಥೆ ಕಲ್ಪಿಸಿವೆ’ ಎಂದರು. ಅದಕ್ಕೆ ಆಕ್ಷೇಪಿಸಿದ ಅಧ್ಯಕ್ಷೆ ‘ಮಹಿಳೆಯರಿಗೆ ಒದಗಿಸಲಾದ ಸಾರಿಗೆ ಸೌಲಭ್ಯ, ದುಡಿಮೆಯ ಅವಧಿ ಹಾಗೂ ಕನಿಷ್ಠ ವೇತನ ಖಾತ್ರಿಪಡಿಸಿಕೊಳ್ಳಿ’ ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಅಧೀನದಲ್ಲಿ ನಡೆಯುತ್ತಿರುವ ಮಹಿಳಾ ವಿದ್ಯಾರ್ಥಿನಿಲಯಗಳ ಸ್ಥಿತಿಗತಿ ಬಗ್ಗೆ ಅವರು ಮಾಹಿತಿ ಪಡೆದರು. ‘ಕೆಲವು ಕಡೆ ಹಾಸ್ಟೆಲ್‌ ಎಂದರೆ ಭೂಮಿ ಮೇಲಿನ ನರಕ ಎಂಬಂತೆ ಇದೆ. ಪ್ರತಿ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಸೌಲಭ್ಯ, ಸುರಕ್ಷತೆ ಒದಗಿಸಿ’ ಎಂದು ತಿಳಿಸಿದರು.

ಡಿಡಿಪಿಐ ಗಂಗಮಾರೇಗೌಡ ಮಾಹಿತಿ ನೀಡಿ ‘ಜಿಲ್ಲೆಯಲ್ಲಿನ 107 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆಪ್ತ ಸಮಾಲೋಚನೆ ಕೇಂದ್ರ ತೆರೆಯಲಾಗಿದೆ. ಈ ವರ್ಷ ಎರಡು ಅನುಚಿತ ವರ್ತನೆ ಪ್ರಕರಣಗಳು ನಡೆದಿದ್ದು, ಕ್ರಮ ಜರುಗಿಸಲಾಗಿದೆ’ ಎಂದರು.

ಪೋಕ್ಸೊ ಪ್ರಕರಣ: ‘2013ರಿಂದ ಈವರೆಗೆ ಪೋಕ್ಸೊ ಕಾಯ್ದೆಯ ಅಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 170 ಹಾಗೂ ಮಕ್ಕಳ ಕಲ್ಯಾಣ ಸಮಿತಿಯಲ್ಲಿ 52 ಪ್ರಕರಣ ದಾಖಲಾಗಿವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದರು.

ಸಿಡಿಪಿಒ ಹುದ್ದೆ ಖಾಲಿ: ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಸಿಡಿಪಿಒ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜಸೇವಕಿ ಜಯಮ್ಮ ಮನವಿ ಮಾಡಿದರು.

ಮಹಿಳಾ ಆಯೋಗದ ಕಾರ್ಯದರ್ಶಿ ಕವಿತಾ ಮಲ್ಲಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಶೈಲಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ರಮೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

ಭ್ರೂಣ ಹತ್ಯೆ ನಿಲ್ಲಲಿ
ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರೂಣಹತ್ಯೆ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾಗಲಕ್ಷ್ಮಿಬಾಯಿ ಆರೋಗ್ಯ ಇಲಾಖೆಯ ಅಧಿಕಾರಿಗೆ ಸೂಚಿಸಿದರು. ‘ಕೆಲವರು ಇಲ್ಲಿನ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿ ನೆರೆಯ ಜಿಲ್ಲೆಗಳಲ್ಲಿ ಭ್ರೂಣಹತ್ಯೆ ಮಾಡಿಸುತ್ತಿರುವ ಬಗ್ಗೆ ಮಾಹಿತಿ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಒಟ್ಟು 33 ಸ್ಕ್ಯಾನಿಂಗ್‌ ಕೇಂದ್ರಗಳಿವೆ.

ಇದರಲ್ಲಿ 29 ಕೇಂದ್ರಗಳು ಖಾಸಗಿಯಾಗಿದ್ದು, ಇವುಗಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ ಹೆಡೆ ಹೇಳಿದರು.

ADVERTISEMENT

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ
ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಆರ್. ಮಮತಾ ತಿಳಿಸಿದರು.  ಬಾಲ್ಯವಿವಾಹ, ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

*
ರಾಮನಗರ ಜಿಲ್ಲೆಯಲ್ಲಿ ವಿಶೇಷವಾಗಿ ಬಹುಪತ್ನಿತ್ವ ಪ್ರಕರಣಗಳು ಹೆಚ್ಚಾಗಿವೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ.
-ನಾಗಲಕ್ಷ್ಮಿಬಾಯಿ,
ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.