ADVERTISEMENT

ಹಾಲು ನೀತಿ ಜಾರಿಯಾಗಲಿ: ಸ್ವಾಮೀಜಿ

ರಾಮನಗರದಲ್ಲಿ ಹೈನುಗಾರರು ‘ಬಯಸಿದ ಕರು ಪಡೆಯುವ ಭಾಗ್ಯ’ ಸಮಾರಂಭ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 7:12 IST
Last Updated 5 ಮಾರ್ಚ್ 2018, 7:12 IST

ರಾಮನಗರ: ಹೈನುಗಾರರ ರಾಸುಗಳಿಗೆ ಕೃತಕ ಗರ್ಭಧಾರಣೆ ಮೂಲಕ ಬಯಸಿದ ಕರು ಪಡೆಯುವ ಕಾರ್ಯಕ್ರಮಕ್ಕೆ ಲಿಂಗ ನಿರ್ಧರಿತ ವೀರ್ಯದ ನಳಿಕೆಗಳನ್ನು ಸರ್ಕಾರ ಸಂಪೂರ್ಣ ಉಚಿತವಾಗಿ ನೀಡಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾ ನಂದನಾಥಸ್ವಾಮಿ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಎನ್.ಡಿ.ಆರ್.ಎ. ದಕ್ಷಿಣ ವಲಯ ಕೇಂದ್ರ (ಆಡುಗೋಡಿ), ರಾಮನಗರ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಸಹಕಾರದಲ್ಲಿ ಭಾನುವಾರ ನಡೆದ ‘ಬಯಸಿದ ಕರು ಪಡೆಯುವ ಭಾಗ್ಯ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಲಿಂಗ ನಿರ್ಧಾರಿತ ವೀರ್ಯವನ್ನು ಬಳಸಿ ಹೆಣ್ಣು ಕರುಗಳನ್ನು ಪಡೆಯುವ ತಂತ್ರಜ್ಞಾನ ಉತ್ತಮ ಕಾರ್ಯಕ್ರಮವಾಗಿದೆ. ಇದರ ಬಗ್ಗೆ ತಿಳಿದುಕೊಂಡು, ಪಶುಗಳಿಗೆ ಅಳವಡಿಸುವತ್ತ ಆಲೋಚನೆ ಮಾಡಬೇಕು ಎಂದರು.

ADVERTISEMENT

ರೈತರು ದೇಶದ ಉಸಿರಾಗಿದ್ದಾರೆ. ಆದರೆ, ಇವರು ಬೆಳೆದ ಬೆಳೆಗಳಿಗೆ ಸೂಕ್ತಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ಮಳೆ ಕೊರತೆ. ಇದರಿಂದ ರೈತರು ಕೃಷಿ ಕಾಯಕದಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ರೈತಪರ ಯೋಜನೆಗಳು, ಸಂಶೋಧನೆಗಳು ಅಗತ್ಯವಿದೆ. ಜಲ ನೀತಿಯಂತೆ ಹಾಲು ನೀತಿ ಜಾರಿಯಾಗಬೇಕಾಗಿದೆ ಎಂದು ತಿಳಿಸಿದರು.

ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು ₹5ನಿಂದ ₹ 7ಕ್ಕೆ ಏರಿಸುವ ಮತ್ತು ಇತರ ಬೇಡಿಕೆಗಳ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂದರು.

ಸಮಾರಂಭ ಉದ್ಘಾಟಿಸಿದ ಕೇಂದ್ರ ಸರ್ಕಾರದ ಪಶುಸಂಗೋಪನೆ ಆಯುಕ್ತ ಡಾ.ಸುರೇಶ್ ಹೊನ್ನಪ್ಪಗೋಳ್ ಮಾತನಾಡಿ, ಬೆಂಗಳೂರಿನ ಹೆಸರುಘಟ್ಟದಲ್ಲಿ ಲಿಂಗ ನಿರ್ಧರಿತ ವೀರ್ಯ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಈಗ ಅಮೇರಿಕ ಮೂಲದ ತಳಿಯನ್ನು ಲಿಂಗ ನಿರ್ಧರಿತ ವೀರ್ಯದಲ್ಲಿ ಬಳಕೆಯಾಗುತ್ತಿದೆ ಎಂದು ತಿಳಿಸಿದರು.

ಸಾಹಿವಾಲ ತಳಿ ಸಂಘದ ಅಧ್ಯಕ್ಷ ಪ್ರೊ.ಪಿ.ಕೆ. ಉಪ್ಪಲ್ ಮಾತನಾಡಿ, ಗೋ ಸೇವೆ ಬಗ್ಗೆ ವೇದಗಳಲ್ಲೂ ಉಲ್ಲೇಖವಿದೆ. ರಾಸುಗಳಲ್ಲಿ ಅನುವಂಶಿಯತೆ ಅಭಿವೃದ್ಧಿಪಡಿಸುವ ತಂತ್ರಜ್ಞಾನದ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ ಎಂದರು.

ಲಿಂಗ ನಿರ್ಧಾರಿತ ವೀರ್ಯ ಬಳಸಿ ಹೆಣ್ಣು ಕರು ಪಡೆಯುವ ತಂತ್ರಜ್ಞಾನ ಕರ್ನಾಟಕದಲ್ಲಿ ಈಗ ತೆರೆದುಕೊಳ್ಳುತ್ತಿದೆ. ಪಂಜಾಬ್ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಪದ್ಧತಿಯನ್ನು ರಾಜ್ಯದ ರೈತರು ವಿಶ್ವಾಸದಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಕೆಎಂಎಫ್‌ ಅಧ್ಯಕ್ಷ ಪಿ. ನಾಗರಾಜ್‌ ಮಾತನಾಡಿ, ಹಸುಗಳಲ್ಲಿ ಹೆಣ್ಣು ಕರುಗಳನ್ನು ಪಡೆಯಲು ವೀರ್ಯ ನಳಿಕೆಯಂತಹ ಕಾರ್ಯಕ್ರಮ ಇಲ್ಲಿ ಅನುಷ್ಠಾನವಾಗುತ್ತಿದೆ. ಇದರಿಂದ ಶೇ 95ರಷ್ಟು ಯಶಸ್ಸು ಕಂಡು ಬಂದಿದೆ. ಒಂದು ನಳಿಕೆ ವೀರ್ಯಕ್ಕೆ ₹ 900 ವೆಚ್ಚವಾಗುತ್ತದೆ. ಸರ್ಕಾರ ₹ 450 ಸಬ್ಸಿಡಿ ನೀಡಿದೆ. ರಾಮನಗರ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಆರಂಭವಾಗಿದ್ದು, ವೈಯಕ್ತಿಕವಾಗಿ ಉಳಿದ ₹ 450 ಭರಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ರೈತರ ಹಣದಿಂದ ₹1ಸಾವಿರ ಕೋಟಿ ಹಣದಲ್ಲಿ ಹಾಲಿನ ಉತ್ಪನ್ನಗಳ ಪ್ಯಾಕಿಂಗ್ ಘಟಕ ಮತ್ತು ಹಾಲಿನ ಪುಡಿ ಮಾಡುವ ಘಟಕ ನಿರ್ಮಾಣವಾಗುತ್ತಿದೆ. ಇದು ರೈತರ ಬೆವರ ಹನಿಯೇ ಹೊರತು ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವಲ್ಲ. ಒಂದು ಹಾಲು ಒಕ್ಕೂಟದ ವತಿಯಿಂದ ರೈತ ಮೃತಪಟ್ಟರೆ ₹2 ಲಕ್ಷ ಕೊಡುವುದಾದರೆ ಸರ್ಕಾರ ಏಕೆ ಕೊಡಬಾರದು ಎಂದರು.

ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರಸ್ವಾಮಿ, ಬೇವೂರುಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿ, ಎನ್.ಡಿ.ಆರ್.ಎ ದಕ್ಷಿಣ ವಲಯ ಕೇಂದ್ರದ ಮುಖ್ಯಸ್ಥ ಡಾ.ಕೆ.ಪಿ.ರಮೇಶ್, ಶಿಬಿರ ವ್ಯವಸ್ಥಾಪಕ ಡಾ.ಶಿವಶಂಕರ್, ನಗರಸಭಾ ಸದಸ್ಯ ಡಿ.ಕೆ.ಶಿವಕುಮಾರ್, ಮುಖಂಡ ಕೆ.ರಮೇಶ್, ನರಸಿಂಹಯ್ಯ, ವೆಂಕಟಸ್ವಾಮಿ ಇದ್ದರು.

**

ವಿಮಾ ಯೋಜನೆ ರಾಷ್ಟ್ರವಾಪಿ ಜಾರಿಗೊಳಿಸಿ

ಹೈನೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸೆಕ್ಸ್‌ ಸೆಮನ್‌ ತಂತ್ರಜ್ಞಾನ ರಾಜ್ಯ ಮತ್ತು ಕೇಂದ್ರ ಸರ್ಕಾರ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಸೆಕ್ಸ್‌ ಸೆಮನ್ ತಂತ್ರಜ್ಞಾನಕ್ಕೆ ಅಗತ್ಯವಾದ ಪ್ರಯೋಗಶಾಲೆ ಸ್ಥಾಪಿಸಿ ಲಿಂಗ ನಿರ್ಧರಿಸಿ ವೀರ್ಯವನ್ನು ಸರ್ಕಾರವೇ ಉಚಿತವಾಗಿ ನೀಡಬೇಕು.

‘ಬಮೂಲ್’ ಮಾದರಿಯಲ್ಲಿ ಹೈನೋದ್ಯಮ ಕುಟುಂಬಕ್ಕೆ ಕನಿಷ್ಠ ₹ 5 ಲಕ್ಷ ವಿಮಾ ಸವಲತ್ತು ಯೋಜನೆಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸಬೇಕು. ರಾಷ್ಟ್ರದಾದ್ಯಂತ ಎಲ್ಲಾ ಶಾಲಾ ಮಕ್ಕಳಿಗೆ ಉಚಿತ ಹಾಲು ನೀಡುವ ಕಾರ್ಯಕ್ರಮ ಜಾರಿಯಾಗಬೇಕು.

ಹಾಲು ಪ್ರೋತ್ಸಾಹ ಧನವನ್ನು ತಲಾ ಲೀಟರ್‍ ಗೆ ₹ 7 ಹೆಚ್ಚಿಸಬೇಕು. ಸಹಕಾರ ಸಂಘಗಳ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು ಎಂದು ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಹಕ್ಕೊತ್ತಾಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.