ADVERTISEMENT

‘ಆಧಾರ್‌’ಗೆ ಗ್ರಾಮೀಣರ ಪರದಾಟ

ಮಾಗಡಿಗೆ ಪ್ರತಿದಿನ ಅಲೆದಾಟ, ವಿಳಂಬಕ್ಕೆ ಅಸಮಾಧಾನ: ಮೂಲಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 10:12 IST
Last Updated 4 ಆಗಸ್ಟ್ 2015, 10:12 IST

ಮಾಗಡಿ: ‘ಆಧಾರ್’ ಕಾರ್ಡ್ ಮಾಡಿಸಲು ತಾಲ್ಲೂಕಿನ ಜನತೆ ಹರಸಾಹಸ ಪಡುವಂತಾಗಿದೆ. ಕಾರ್ಡ್‌ ಮಾಡಿಸಲು ಪ್ರತಿ ದಿನ ಅಲೆದಾಡಬೇಕಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಚಿಕ್ಕತೊರೆ ಲಂಬಾಣಿ ತಾಂಡ್ಯದ ಭೀಮಾನಾಯ್ಕ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಕಂದಾಯ ಇಲಾಖೆ ಅಧಿಕಾರಿಗಳು ದಿನವೊಂದಕ್ಕೆ 25 ಜನರಿಗೆ ಮಾತ್ರ ಚೀಟಿ ನೀಡಿ ಆಧಾರ್ ಕಾರ್ಡ್ ಮಾಡಿಕೊಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ದೂರದ ಊರುಗಳಿಂದ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟು, ಮನೆಮಂದಿಯೆಲ್ಲ ಬಸ್‌್ ಹಿಡಿದು ಮಾಗಡಿಗೆ 9 ಗಂಟೆಗೆ ಬಂದು ಕಚೇರಿಯ ಮುಂದೆ 11 ಗಂಟೆಯವರೆಗೆ ಕಾದು ಕುಳಿತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ದೂರಿದರು.

ಬೆಂಗಳೂರಿನಲ್ಲಿ ವಾಸವಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು 11 ಗಂಟೆಗೆ ಕಚೇರಿಗೆ ಬರುತ್ತಾರೆ. ಕಂಪ್ಯೂಟರ್ ಆನ್ ಮಾಡಿದ ತಕ್ಷಣ ವಿದ್ಯುತ್ ಕೈ ಕೊಟ್ಟಿರುತ್ತದೆ. ತಹಶೀಲ್ದಾರ ಅವರ ಕಚೇರಿಯಲ್ಲಿ ಸಾರ್ವಜನಿಕರಿಗೆ ಶೌಚಾಲಯವಾಗಲಿ, ಕುಡಿಯುವ ನೀರಾಗಲಿ, ಕುಳಿತುಕೊಳ್ಳಲು ಕನಿಷ್ಟ ಬೆಂಚುಗಳಾಗಲಿ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು, ಮುದುಕರು, ಮಕ್ಕಳು  ದೂಳು ತುಂಬಿರುವ ನೆಲದ ಮೇಲೆ ಕುಳಿತುಕೊಳ್ಳಬೇಕಿದೆ. ಸಾರ್ವಜನಿಕರನ್ನು ಯಾವ ಅಧಿಕಾರಿಯು ಮಾತನಾಡಿಸುವುದಿರಲಿ, ಕಣ್ಣೆತ್ತಿಯೂ ಸಹ ನೋಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ಬರುವವರೆಗೂ ಸಾರ್ವಜನಿಕರು ಪರಸ್ಪರ ಸಾಲಾಗಿ ನಿಲ್ಲಲು ಜಗಳವಾಡುತ್ತಿರುತ್ತಾರೆ. ಸಾವಿರಾರು ಜನರು ಸಾಲಾಗಿ ನಿಂತಿರುವಾಗ 25 ಜನರಿಗೆ ಮಾತ್ರ ದಿನವೊಂದಕ್ಕೆ ಆಧಾರ್ ಕಾರ್ಡ್ ಮಾಡಿಸಲು ಫೋಟೋ ತೆಗೆಸಿ, ಹೆಬ್ಬೆರಳಿನ ಸಹಿ ತೆಗೆದುಕೊಳ್ಳಲು ಕಳುಹಿಸುವ ವೇಳೆಗೆ ಸಂಜೆ ಆರು ಗಂಟೆಯಾಗಿರುತ್ತದೆ. ಮತ್ತೆ ಬಸ್ ಹಿಡಿದು ಮನೆ ತಲುಪುವ ವೇಳೆಗೆ 9 ಗಂಟೆಯಾಗಿರುತ್ತದೆ ಎಂದರು.

ಪ್ರತಿ ನಿತ್ಯ ತಿಪ್ಪಸಂದ್ರ, ಕುದೂರು, ಸೋಲೂರು, ಮಾಡಬಾಳ್, ಕಸಬ ಹೋಬಳಿಗಳಿಂದ ಗ್ರಾಮೀಣ ಜನತೆ ಇಡೀ ಕುಟುಂಬದೊಂದಿಗೆ ಆಧಾರ್ ಕಾರ್ಡ್ ಮಾಡಿಸಲು ಅಲೆದಾಡಬೇಕಿದೆ. ಪ್ರತಿನಿತ್ಯದ ದುಡಿಮೆ ಬಿಟ್ಟು ಇಲ್ಲಿ ಬರಬೇಕಾಗಿದೆ ಎಂದು ಗ್ರಾಮಸ್ಥರು ದೂರಿದರು.

ತಿಪ್ಪಸಂದ್ರದ ನಾರಾಯಣಾಚಾರ್ ಮಾತನಾಡಿ, ಕಳೆದ 1 ವಾರದಿಂದ ಆಧಾರ್ ಕಾರ್ಡ್ ಮಾಡಿಸಲು ಮನೆ ಮಂದಿಯೆಲ್ಲ ತಹಶೀಲ್ದಾರ್ ಕಚೇರಿ ಸುತ್ತುತ್ತಿದ್ದೇವೆ. ಜಿಲ್ಲಾಡಳಿತ ಸಾರ್ವಜನಿಕರ ಸಮಸ್ಯೆಗಳತ್ತ ಗಮನ ಹರಿಸಿ ಶೀಘ್ರವಾಗಿ ಆಧಾರ್ ಕಾರ್ಡ್ ಮಾಡಿಸಿಕೊಡಲು ಸೂಕ್ತ ಯೋಜನೆ ರೂಪಿಸುವಂತೆ ಮನವಿ ಮಾಡಿದರು.

ಸರ್ಕಾರಿ ಕಚೇರಿಗಳಲ್ಲಿ ಕನಿಷ್ಠ ಕುಡಿಯುವ ನೀರು, ಶೌಚಾಲಯ, ಸಾರ್ವಜನಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಮಾಡಬಾಳ್‌ ಶಿವಲಿಂಗಯ್ಯ ತಿಳಿಸಿದರು.

ಪ್ರತಿಕ್ರಿಯೆ: ತಹಶೀಲ್ದಾರ್ ಸಿ.ಎಚ್.ಶಿವಕುಮಾರ್ ಪ್ರತಿಕ್ರಿಯೆ ನೀಡಿ ಸಾರ್ವಜನಿಕರ ಅನುಕೂಲಕ್ಕಾಗಿ ವಿದ್ಯುತ್ ಕೈ ಕೊಟ್ಟಾಗ ಆಧಾರ್ ಕಾರ್ಡ್ ಮಾಡಿಸಲು ಯುಪಿಎಸ್ ಖರೀದಿಸಲಾಗುವುದು. ವಿಳಂಬವಿಲ್ಲದೆ ಆಧಾರ್ ಕಾರ್ಡ್ ಮಾಡಿಸಿಕೊಡುವಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
*
ಸರ್ಕಾರ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಮತ್ತೊಂದು ಆಧಾರ್ ಕಾರ್ಡ್ ಕೇಂದ್ರ ಆರಂಭಿಸಬೇಕು. ವಿದ್ಯುತ್ ಕೈ ಕೊಟ್ಟಾಗ ಸಹಾಯಕ್ಕೆ ಬರಲು ಯುಪಿಎಸ್ ಅಳವಡಿಸಬೇಕು
-ಶಿವಣ್ಣ,
ಪೊಲೋಹಳ್ಳಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.