ADVERTISEMENT

‘ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಿ’

ಯುವ ಸಮುದಾಯಕ್ಕೆ ಸ್ವಾತಂತ್ರ್ಯ ಹೋರಾಟಗಾರ ಡಾ.ಟಿ.ವಿ. ವರದಪ್ಪ ಕರೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 10:53 IST
Last Updated 9 ಅಕ್ಟೋಬರ್ 2015, 10:53 IST

ಚನ್ನಪಟ್ಟಣ: ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಎಲ್ಲರೂ ಮುಂದಾಗಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಟಿ.ವಿ. ವರದಪ್ಪ ಕರೆ ನೀಡಿದರು.

ತಾಲ್ಲೂಕಿನ ಬೆಳಕೆರೆಯ ಸಂಪೂರ್ಣ ತಾಂತ್ರಿಕ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಇತೀಚಿಗೆ ಏರ್ಪಡಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಕುರಿತ ವಿಚಾರ ಸಂಕಿರಣ ಮತ್ತು ಸ್ವಚ್ಛತಾ ಆಂದೋಲನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಯುವ ಜನಾಂಗ ಗಾಂಧೀಜಿಯವರ ಬದುಕನ್ನು ಮಾದರಿಯಾಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಗಾಂಧೀಜಿ ಅವರನ್ನು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ರಾಮಚಂದ್ರಪ್ಪ ಮಾತನಾಡಿ, ಪ್ರಸ್ತುತ ಭ್ರಷ್ಟಚಾರದ ತೀವ್ರತೆ ಹಾಗೂ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಅದರ ವಿರುದ್ಧ ಹೋರಾಟ ಮಾಡುವುದರ ಮೂಲಕ ತಮ್ಮ ಜವಾಬ್ದಾರಿಯನ್ನು ಸಮಾಜಕ್ಕೆ ತಿಳಿಸಿಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ಬಿ.ಎಸ್.ಎಂ.ನಾಯ್ಡು ಉದ್ಘಾಟಿಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಎಲ್.ರಮೇಶ್‌ಗೌಡ, ಶ್ರೀನಿವಾಸ್ ಚಿನಮಿಲಿ, ಪ್ರಾಂಶುಪಾಲ ಡಾ.ಎಂ.ಆರ್.ಶಿವಕುಮಾರ್, ವಂದಾರಗುಪ್ಪೆ ಗ್ರಾ.ಪಂ. ಅಧ್ಯಕ್ಷೆ ಸುಧಾಚಂದ್ರು, ಗ್ರಾ.ಪಂ ಸದಸ್ಯರಾದ ನಾಗೇಶ್, ಮಂಜುಳ, ಬಾಬು, ನಗರಸಭಾ ಸದಸ್ಯರಾದ ಶಶಿಕುಮಾರ್, ಜಬೀಉಲ್ಲಾಖಾನ್ ಘೋರಿ, ನಿವೃತ್ತ ಮೇಜರ್ ಬೋಪಣ್ಣ ಮತ್ತಿತರರ ಭಾಗವಹಿಸಿದ್ದರು.

***
ಸಮಾಜದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದ್ದು, ಅದನ್ನು ಹತ್ತಿಕ್ಕಲು ಸರ್ಕಾರವು ಕಠಿಣ ಕಾನೂನು ಜಾರಿಗೆ ತರುವುದು ಅವಶ್ಯಕ.
-ಡಾ.ಟಿ.ವಿ.ವರದಪ್ಪ,
ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.