ADVERTISEMENT

‘ರಂಗಭೂಮಿ ಕಲಾವಿದರ ಬದುಕು ದುಸ್ತರ’

ರಾಮನಗರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 10:34 IST
Last Updated 28 ಮಾರ್ಚ್ 2015, 10:34 IST

ರಾಮನಗರ: ರಾಮನಗರ ತಾಲ್ಲೂಕು ರಂಗಭೂಮಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿನ ಹಲವು ರಂಗಭೂಮಿ ಕಲಾವಿದರು ನಾಡಿನ ವಿವಿಧ ನಾಟಕ ಕಂಪೆನಿಗಳ ಮೂಲಕ ಕಲಾ ಕ್ಷೇತ್ರಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ ಎಂದು ಸಂಗೀತ ವಿದ್ವಾನ್ ಶಿವಾಜಿರಾವ್ ತಿಳಿಸಿದರು.

ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್‌ ಜಂಟಿಯಾಗಿ ನಗರದ ಸ್ಫೂರ್ತಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಂಗಗೀತೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬನ್ನಿಕುಪ್ಪೆಯ ಗುರುಮೂರ್ತಪ್ಪ ಅವರು ಕರ್ನಾಟಕದ ರಂಗಭೂಮಿಗೆ ತಮ್ಮದೇ ಆದ ಕೊಡಗೆ ನೀಡಿದ್ದಾರೆ. ಖ್ಯಾತ ಚಿತ್ರನಟ ಡಾ. ರಾಜ್‌ ಕುಮಾರ್ ಅವರಿಗೆ ಗುಬ್ಬಿ ಕಂಪೆನಿಯಲ್ಲಿದ್ದ ಗುರುಮೂರ್ತಪ್ಪ ಅವರು ಮಾರ್ಗದರ್ಶಕರಾಗಿದ್ದರು. ಈ ಮಾತನ್ನು ಸ್ವತಃ ರಾಜ್‌ ಕುಮಾರ್ ಅವರೇ ಗುರುಮೂರ್ತಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹೇಳಿದ್ದರು ಎಂದು ಅವರು ಸ್ಮರಿಸಿದರು.

ಇಂದು ರಂಗಭೂಮಿಯ ಕಲಾವಿದರ ಬದುಕು ದುಸ್ತರವಾಗಿದೆ. ಸರ್ಕಾರದ ವತಿಯಿಂದ ಸಿಗಬೇಕಾದ ಸೌಲಭ್ಯಗಳು ಅರ್ಹ, ಪ್ರಾಮಾಣಿಕ ಕಲಾವಿದರನ್ನು ತಲುಪುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟಿನ ಕಾರ್ಯದರ್ಶಿ ಡಾ.ಎಂ. ಬೈರೇಗೌಡ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಯನ್ನು ಕಾಣುತ್ತಿದ್ದೇವೆ. ಆದರೆ ಈ ಬದಲಾವಣೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಸ್ಥಿರತೆಯನ್ನು ಮೂಡಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು, ಸಂಶೋಧಕರು ರಾಮನಗರ ತಾಲ್ಲೂಕು ಕನ್ನಡ ನಾಡಿನ ರಂಗಭೂಮಿಗೆ ನೀಡಿರುವ ಕೊಡುಗೆ ಕುರಿತು ಸಂಶೋಧಿಸಬೇಕು.  ಈ ಬಗ್ಗೆ ಅಧ್ಯಯನ ಮಾಡಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರಬೇಕಾಗಿದೆ. ಇದರಿಂದ ಮುಂದಿನ ತಲೆಮಾರಿನ ಜನರಿಗೆ ರಂಗಭೂಮಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮಾಹಿತಿಗಳಲ್ಲವೂ ನಾಶವಾಗುತ್ತವೆ ಎಂದರು. ಈ ಸಂದರ್ಭದಲ್ಲಿ ಸಾಹಿತಿ ಎಸ್. ಸುಮಂಗಲ ಹಾರೋಕೊಪ್ಪ, ಸಾಹಿತ್ಯ ಸೌರಭ ಟ್ರಸ್ಟಿನ ಅಧ್ಯಕ್ಷ ಜಿ.ಕೃಷ್ಣಾನಾಯಕ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.