ADVERTISEMENT

‘ದೇಶದ ಸಂಸ್ಕೃತಿ ಪ್ರಭಾವಕ್ಕೆ ಒಳಗಾದ ವಿದೇಶಿಯರು’

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 5:10 IST
Last Updated 10 ಜನವರಿ 2018, 5:10 IST

ಚನ್ನಪಟ್ಟಣ: ವಿದೇಶಿಯರು ಇತ್ತೀಚಿನ ದಿನಗಳಲ್ಲಿ ದೇಶದ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಇಲ್ಲಿನ ಸಂಸ್ಕೃತಿ ಅನುಸರಿಸುತ್ತಿರುವುದು ದೇಶಕ್ಕೆ ಸಲ್ಲುತ್ತಿರುವ ಗೌರವ ಎಂದು ಮಹ ದೇಶ್ವರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಂ.ಬಿ.ರಾಹುಲ್ ರಾಜೇ ಅರಸ್ ಅಭಿಪ್ರಾಯಪಟ್ಟರು.

ಪಟ್ಟಣದ ಜ್ಞಾನ ಸರೋವರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಸ್ಕೃತಿ ದಿನ-2018 ಸಮಾರಂಭ  ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆಚಾರ, ವಿಚಾರ, ಉಡುಗೆ, ತೊಡುಗೆ, ಭಾಷೆಯ ಆಕರ್ಷಣೆಗೆ ವಿದೇಶಿಯರು ಒಳಗಾಗಿ ಅನುಸರಿಸುವಷ್ಟು ಅಮೂಲ್ಯ ವಾದ ಸಂಸ್ಕೃತಿಯಾಗಿದೆ ಎಂದು ಹೇಳಿದರು.

ಭಾರತದ ಸಂಸ್ಕೃತಿಯನ್ನು ಇಡೀ ಪ್ರಪಂಚವೇ ಗೌರವಿಸುತ್ತಿದೆ. ಭವ್ಯ ಪರಂಪರೆ ಉಳಿಸಿ ಬೆಳೆಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿ ಯುವಜನರ ಮೇಲಿದೆ. ಸಮಾಜದ ಕೆಲವು ಆದರ್ಶಪ್ರಾಯವಾದ ಆಚರಣೆ ಪಾಲಿಸುವುದು ಅವಶ್ಯ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಕಾರ್ಯದರ್ಶಿ ಆದರ್ಶಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಸೃಷ್ಟಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮೂಡಿಸುವ ಸಲುವಾಗಿ ಕಾಲೇಜಿನಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾಲೇಜು ಶ್ರಮಿಸುತ್ತಿದೆ ಎಂದು ಹೇಳಿದರು.

ಉಪನ್ಯಾಸಕಿ ಟಿ.ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಸಂಸ್ಥೆಯ ಖಜಾಂಚಿ ಬಿ.ಎಸ್.ಹೇಮಲತಾ, ಉಪನ್ಯಾಸಕರಾದ ಪೂರ್ಣಿಮಾ, ಭವ್ಯಶ್ರೀ, ಸೌಮ್ಯಾ, ಕಾವ್ಯಾಯ, ಪ್ರವೀಣ್, ಅಭಿಲಾಷ್ ಕುಮಾರ್ ಇದ್ದರು.

ಕಲಾವಿದ ಎಚ್.ಸಿ.ಹೊಳಸಾಲಯ್ಯ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಗಮನ ಸೆಳೆದರು. ನಂತರ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.