ADVERTISEMENT

ಕನ್ನಡ ನಾಮಫಲಕ ಆಂದೋಲನಕ್ಕೆ ಸೂಚನೆ: ಎಸ್‌.ಜಿ. ಸಿದ್ಧರಾಮಯ್ಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 14:55 IST
Last Updated 28 ಸೆಪ್ಟೆಂಬರ್ 2018, 14:55 IST
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಮಾತನಾಡಿದರು
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಮಾತನಾಡಿದರು   

ರಾಮನಗರ: ಜಿಲ್ಲೆಯಲ್ಲಿನ ಕಾರ್ಖಾನೆಗಳು, ವ್ಯಾಪಾರ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಅಭಿಯಾನ ಹಮ್ಮಿಕೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಸೂಚಿಸಿದರು.

ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತು ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು. ಕೈಗಾರಿಕಾ ಪ್ರದೇಶಗಳಲ್ಲಿನ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಸರ್ಕಾರಿ ಪ್ರಚಾರ ಫಲಕಗಳಲ್ಲೂ ಕೆಲವು ಕಡೆ ಇಂಗ್ಲಿಷ್ ಬಳಕೆ ಕಂಡುಬಂದಿದ್ದು, ಅಂತಹವುಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು. ಇನ್ನು 15 ದಿನದೊಳಗೆ ಈ ಅಭಿಯಾನ ಹಮ್ಮಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಭರವಸೆ ನೀಡಿದರು.

ಕನ್ನಡ ಕಲಿಯದಿದ್ದರೆ ಹೊರಕ್ಕೆ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಅನ್ಯ ರಾಜ್ಯಗಳ ಸಿಬ್ಬಂದಿಯು 6 ತಿಂಗಳೊಳಗೆ ಕನ್ನಡ ಕಲಿಯದೇ ಹೋದಲ್ಲಿ ಅಂತಹ ಸಿಬ್ಬಂದಿಯನ್ನು ವಾಪಸ್ ಕಳುಹಿಸಲು ಶಿಫಾರಸು ಮಾಡುವುದಾಗಿ ಸಿದ್ದರಾಮಯ್ಯ ಎಚ್ಚರಿಸಿದರು.

ADVERTISEMENT

ಜಿಲ್ಲೆಯ ಹಲವು ಬ್ಯಾಂಕುಗಳಲ್ಲಿ ಹಿಂದಿ ಭಾಷಿಕರು ಹೆಚ್ಚಾಗಿದ್ದು, ಗ್ರಾಮೀಣ ಜನರು ಅವರೊಟ್ಟಿಗೆ ವ್ಯವಹರಿಸುವುದು ಕಷ್ಟವಾಗುತ್ತಿದೆ. ಅಂತಹವರು ನಿಯಮದ ಪ್ರಕಾರ 6 ತಿಂಗಳೊಳಗೆ ಕನ್ನಡ ಕಲಿಯಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಸ್ಥಳೀಯರಿಗೆ ಉದ್ಯೋಗ ನೀಡಿ: ಬೃಹತ್‌ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.

‘ಜಿಲ್ಲೆಯಲ್ಲಿ 51 ಭಾರಿ ಮತ್ತು ಮಧ್ಯಮ ಗಾತ್ರದ ಕಾರ್ಖಾನೆಗಳಿದ್ದು, ಒಟ್ಟು 17 ಸಾವಿರ ಸ್ಥಳೀಯರಿಗೆ ಉದ್ಯೋಗ ದೊರೆತಿದೆ. ಸಿ ಮತ್ತು ಡಿ ದರ್ಜೆಯಲ್ಲಿ ಶೇ 95ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ನೀಡಲಾಗಿದೆ’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
‘ಕನ್ನಡಿಗರು ಎಂದು ಖಾತ್ರಿ ಮಾಡಿಕೊಳ್ಳಲು ಯಾವ ಮಾನದಂಡ ಇಟ್ಟುಕೊಂಡಿದ್ದೀರಿ?’ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಈ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಸಮಿತಿ ಇದ್ದಾಗ್ಯೂ ನಿಯಮಿತವಾಗಿ ಸಭೆ ನಡೆಸದೇ ಇರುವುದಕ್ಕೆ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದ ಅವರು, ಮುಂದಾದರೂ ಸಭೆ ಹಮ್ಮಿಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಒಂದನೇ ತರಗತಿಯಿಂದ ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಸಿ, ಶಾಲೆಗಳ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್‌, ಪ್ರಾಧಿಕಾರದ ಸದಸ್ಯರಾದ ಎಲ್ಲೆಗೌಡ ಬೆಸಗರಹಳ್ಳಿ, ಪ್ರಭಾಕರ ಪಾಟೀಲ, ಗಿರೀಶ್‌ ಪಟೇಲ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಅನಸೂಯಮ್ಮ, ದೊಡ್ಡಯ್ಯ, ಗಣಕ ಪರಿಷತ್‌ ಕಾರ್ಯದರ್ಶಿ ನರಸಿಂಹಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಇದಕ್ಕೂ ಮುನ್ನ ಅಧ್ಯಕ್ಷರು ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಕನ್ನಡ ಪರ ಮತ್ತು ಸಾಂಸ್ಕೃತಿಕ ಸಂಘಟನೆಗಳ ಸದಸ್ಯರೊಂದಿಗೆ ಸಭೆ ನಡೆಸಿದರು.

ಕನ್ನಡದ ಇಲಾಖೆಯಿಂದ ಇಂಗ್ಲಿಷ್‌ನಲ್ಲಿ ಉತ್ತರ!

ಪುಟ್ಟರಾಜು ಎಂಬುವರು ಕೇಳಿರುವ ಮಾಹಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂಗ್ಲಿಷ್‌ನಲ್ಲಿ ಉತ್ತರ ನೀಡಿರುವ ಕ್ರಮಕ್ಕೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು.

‘ನನಗೆ ಅರ್ಥವಾಗದೇ ಇರಲಿ ಎಂದು ಬೇಕಂತಲೇ ಇಲಾಖೆಯವರು ಹೀಗೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. ಕನ್ನಡದ ರಕ್ಷಣೆ ಮಾಡಬೇಕಾದ ನೀವೇ ಹೀಗೆ ಮಾಡಿದರೆ ಹೇಗೆ?’ ಎಂದು ಪ್ರಶ್ನಿಸಿದರು.

‘ಬೆಂಗಳೂರು ಕಚೇರಿಯವರು ಕಳುಹಿಸಿದ್ದ ವಿವರಗಳನ್ನು ನೀಡಿದ್ದೇವೆ ಅಷ್ಟೇ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ರಾಜು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ಕನ್ನಡದಲ್ಲೇ ಆದೇಶ: ಡಿ.ಸಿ.ಗೆ ತಾಕೀತು

ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯು ವಿಚಾರಣೆಗಳ ಆದೇಶವನ್ನು ಇನ್ನು ಮುಂದೆ ಕನ್ನಡದಲ್ಲಿ ನೀಡಬೇಕು ಎಂದು ಅಧ್ಯಕ್ಷರು ಕೆ. ರಾಜೇಂದ್ರ ಅವರಿಗೆ ತಾಕೀತು ಮಾಡಿದರು.

‘ಪ್ರಕರಣಗಳ ಆದೇಶವನ್ನು ಇಂಗ್ಲಿಷ್‌ನಲ್ಲಿ ಮಾತ್ರ ನೀಡುತ್ತಿದ್ದೀರಿ. ನಮ್ಮ ಆಡಳಿತ ಏನಿದ್ದರೂ ಕನ್ನಡದಲ್ಲಿ ಇರಬೇಕು. 15 ದಿನಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವೆಬ್‌ಸೈಟ್‌ನಲ್ಲಿ ಕನ್ನಡಕ್ಕೆ ಅವಕಾಶ ನೀಡುವಂತೆಯೂ ಸೂಚಿಸಿದರು.

ಕನ್ನಡ ಭವನ ನಿರ್ಮಾಣಕ್ಕೆ ಸೂಚನೆ

ರಾಮನಗರವು ಜಿಲ್ಲಾ ಕೇಂದ್ರವಾಗಿ ದಶಕವಾದರೂ ಕನ್ನಡ ಭವನ ನಿರ್ಮಾಣ ಮಾಡದಿರುವುದಕ್ಕೆ ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದರು.
‘ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಈ ಬಗ್ಗೆ ದೂರಿದ್ದಾರೆ. ಕೂಡಲೇ ನಿವೇಶನ ಗುರುತಿಸಿ, ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಮುಖ್ಯಮಂತ್ರಿ ಬಳಿಗೂ ಈ ವಿಚಾರ ಮುಟ್ಟಿಸಿ’ ಎಂದು ತಿಳಿಸಿದರು.

ನರ್ಸರಿ ಆರಂಭಕ್ಕೆ ಶಿಫಾರಸು

ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಶಾಲೆಗಳ ಆರಂಭಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಿದ್ಧರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನರ್ಸರಿಗಳ ಮಾದರಿಯಲ್ಲಿ ಶಾಲೆಗಳನ್ನು ತೆರೆದು, ಅಲ್ಲಿ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಅನ್ನೂ ಕಲಿಸುವಂತೆ ಕೋರಲಾಗಿದೆ. ಪ್ರಾಥಮಿಕ ಹಂತದಲ್ಲೇ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಕೆಗೆ ನಮ್ಮ ಸಹಮತವಿದೆ ಎಂದರು.
ಪ್ರತ್ಯೇಕ ನಾಡ ಧ್ವಜ ಕುರಿತ ಸದ್ಯದ ಬೆಳವಣಿಗೆಗಳ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ. ‘ಸರ್ಕಾರದ ಸೂಚನೆಯಂತೆ ವರದಿ ಸಲ್ಲಿಸಿದ್ದೆವು. ಅದನ್ನು ಆಧರಿಸಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಮುಂದಿನ ಬೆಳವಣಿಗೆಗಳ ಬಗ್ಗೆ ಸರ್ಕಾರವನ್ನೇ ಕೇಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.