ADVERTISEMENT

ಅಡಿಕೆಗೆ ಎಪಿಎಂಸಿ ತೆರಿಗೆ ರದ್ದು ಪಡಿಸಿ: ಎಂ.ಎನ್.ಹೆಗಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 4:54 IST
Last Updated 18 ಜುಲೈ 2017, 4:54 IST

ಸಾಗರ: ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಅಡಿಕೆಗೆ ಎಪಿಎಂಸಿ ವತಿಯಿಂದ ತೆರಿಗೆ ವಿಧಿಸುವುದು ರದ್ದಾಗಬೇಕು ಎಂದು ಕರ್ನಾಟಕ ಅರೇಕಾ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಎಂ.ಎನ್.ಹೆಗಡೆ ಒತ್ತಾಯಿಸಿದರು. ಇಲ್ಲಿನ ಶೃಂಗೇರಿ ಶಂಕರ ಮಠದ ಭಾರತೀ ತೀರ್ಥ ಸಭಾಭವನದಲ್ಲಿ ಕರ್ನಾಟಕ ಅರೇಕಾ ಚೇಂಬರ್‌ ಆಫ್‌ ಕಾಮರ್ಸ್‌ ಭಾನುವಾರ ಏರ್ಪಡಿಸಿದ್ದ ಜಿಎಸ್‌ಟಿ ಕುರಿತ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಒಂದೇ ದೇಶ, ಒಂದೇ ತೆರಿಗೆ’ ಎನ್ನುವ ಪರಿಕಲ್ಪನೆಯನ್ನು ಜಿಎಸ್‌ಟಿ ಹೊಂದಿದೆ. ಈ ಪದ್ಧತಿಯಡಿ ಅಡಿಕೆಗೆ ತೆರಿಗೆ ವಿಧಿಸುತ್ತಿರುವಾಗ ಮತ್ತೆ ಎಪಿಎಂಸಿಗೆ ತೆರಿಗೆ ಕಟ್ಟಬೇಕು ಎನ್ನುವುದು ಅವೈಜ್ಞಾನಿಕ ಪದ್ಧತಿಯಾಗುತ್ತದೆ. ಹಾಗಾಗಿ ಎಪಿಎಂಸಿ ತೆರಿಗೆ ರದ್ದು ಮಾಡ ಬೇಕೆಂದು ಒತ್ತಾಯಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಾಗುವುದು ಎಂದು ತಿಳಿಸಿದರು.

ಏಕರೂಪ ತೆರಿಗೆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ನಂತರವೂ ಪ್ರತ್ಯೇಕ ತೆರಿಗೆ ಪಾವತಿಸಬೇಕಾದ ಸ್ಥಿತಿ ಅಡಿಕೆ ಬೆಳೆಗಾರರಿಗೆ, ವರ್ತಕರಿಗೆ, ದಲ್ಲಾಳಿಗಳಿಗೆ ಎದುರಾಗಿರುವುದು ಬೇಸರದ ಸಂಗತಿಯಾಗಿದೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜಿಎಸ್‌ಟಿಯ ಆಡಳಿತ ನಿರ್ವಹಣಾ ಸಮಿತಿಯ ಗಮನಕ್ಕೂ ಈ ವಿಷಯವನ್ನು ತರಲಾಗುವುದು ಎಂದು ಹೇಳಿದರು.

ADVERTISEMENT

ಕರ್ನಾಟಕ ಅರೇಕಾ ಚೇಂಬರ್‌ ಆಫ್‌ ಕಾಮರ್ಸ್‌ನ ಸಂಸ್ಥಾಪಕ ಅಧ್ಯಕ್ಷ ಎಂ.ರಾಜಶೇಖರ್‌, ಶಿವಮೊಗ್ಗ ಅರೇಕಾ ಚೇಂಬರ್ಸ್‌ನ ಓಂಕಾರಪ್ಪ, ಪ್ರಕಾಶ್ ಕಾಮತ್‌ ಶಿರಸಿ ಹಾಜರಿದ್ದರು.ಜಿಎಸ್‌ಟಿ ಕುರಿತು ನಡೆದ ಸಂವಾದದಲ್ಲಿ ಲೆಕ್ಕಪರಿಶೋಧಕರಾದ ಬಿ.ವಿ.ರವೀಂದ್ರನಾಥ್‌, ಸಂತೋಷ್ ಪ್ರಭು, ಆದರ್ಶ ಪ್ರಭು, ನರೇಂದ್ರ ಭಾಗವಹಿಸಿದ್ದರು. ಎಪಿಎಂಸಿ ಸದಸ್ಯ ವೆಂಕಟೇಶ್‌ ಸ್ವಾಗತಿಸಿದರು. ಅಶ್ವಿನಿಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತೇಶ್‌ ಬಾಗಲಕೋಟೆ ವಂದಿಸಿದರು. ಎಂ.ವಿ.ಮೋಹನ ಗೌಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.