ADVERTISEMENT

ಅಡಿಕೆ ಜೊತೆ ಭತ್ತ ಬೆಳೆದ ರೈತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 9:11 IST
Last Updated 22 ಸೆಪ್ಟೆಂಬರ್ 2017, 9:11 IST
ಆನವಟ್ಟಿ ಸಮೀಪದ ಕುಬಟೂರು ಗ್ರಾಮದ ರೈತ ಸುರೇಶ್‌ ಅವರ ಮಿಶ್ರಬೆಳೆಯ ತೋಟ
ಆನವಟ್ಟಿ ಸಮೀಪದ ಕುಬಟೂರು ಗ್ರಾಮದ ರೈತ ಸುರೇಶ್‌ ಅವರ ಮಿಶ್ರಬೆಳೆಯ ತೋಟ   

ಆನವಟ್ಟಿ: ಸೊರಬ ಭತ್ತದ ಖಣಜ ಎಂದು ಹೆಸರು ಮಾಡಿತ್ತು. ಆದರೆ, ಸತತ ಬರಗಾಲದಿಂದ ನಿಗದಿತ ಪ್ರಮಾಣದಷ್ಟು ಮಳೆಯಾಗದೇ ಗದ್ದೆಯಲ್ಲೂ ಮೆಕ್ಕೆಜೋಳ ಬೆಳೆಯುವ ಸ್ಥಿತಿ ಬಂದಿದೆ. ಇದರ ನಡುವೆಯೇ ಕುಬಟೂರು ಗ್ರಾಮದ ಯುವ ರೈತ ಸುರೇಶ ಅವರು ಮಿಶ್ರಬೆಳೆ ಪದ್ಧತಿಯಲ್ಲಿ ಕೃಷಿ ಕ್ರಾಂತಿ ಮಾಡಿ ಗಮನ ಸೆಳೆದಿದ್ದಾರೆ.

ಒಂದೂವರೆ ಎಕರೆ ಕೃಷಿ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ 750 ಅಡಿಕೆ ಸಸಿ ಹಾಗೂ 750 ಬಾಳೆ ಸಸಿಗಳನ್ನು ಹಚ್ಚಿದ್ದಾರೆ. ಗಿಡಗಳು ಚಿಕ್ಕದಾಗಿರುವುದರಿಂದ ಅದರ ಜೊತೆಯಲ್ಲೇ ಭತ್ತವನ್ನೂ ಬೆಳೆದಿದ್ದಾರೆ. ಸಾಮಾನ್ಯವಾಗಿ ಅಡಿಕೆ ಜೊತೆ ಶುಂಠಿ, ಅರಿಶಿಣ, ಬಾಳೆ, ಮೆಣಸು ಬೆಳೆಯುತ್ತಾರೆ. ನೀರು ಹೆಚ್ಚು ಬೇಕು ಎಂಬ ಕಾರಣಕ್ಕೆ ಅಡಿಕೆ ಜೊತೆಗೆ ಭತ್ತವನ್ನು ಬೆಳೆಯುವುದಿಲ್ಲ.

‘ಸುರೇಶ ಅವರು ಹೊಸ ಪ್ರಯತ್ನಕ್ಕೆ ಕೈಹಾಕಿ ಕೃಷಿಯಲ್ಲಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಪ್ಪ ಶ್ಲಾಘಿಸಿದರು. ‘ನಾನು ಅಡಿಕೆ ಜೊತೆ ಮಿಶ್ರ ಬೆಳೆಯಾಗಿ ಬಾಳೆ ಆಯ್ಕೆ ಮಾಡಿಕೊಂಡೆ. ನಂತರ ಹೊಸ ಪ್ರಯತ್ನವಾಗಿ ನಡುವೆ ಭತ್ತವನ್ನೂ ಬಿತ್ತಿದೆ. ಮೊದಲು ನನಗೂ ಆಂತಕವಿತ್ತು. ಹಿರಿಯ ಅನಭವಿ ರೈತರ ಸಹಕಾರ ಮತ್ತು ಮಾರ್ಗದರ್ಶನದಿಂದ ಮಿಶ್ರಬೆಳೆ ತೆಗೆಯಲು ಸಾಧ್ಯವಾಯಿತು’ ಎಂದು ಸುರೇಶ ಅವರು ತಿಳಿಸಿದರು.

ADVERTISEMENT

‘ಮೂರು ವರ್ಷಗಳಿಂದ ತಾಲ್ಲೂಕಿನಲ್ಲಿ ಬರಗಾಲವಿದೆ. ಈ ವಾತಾವರಣದಿಂದ ಅಡಿಕೆ ಜೊತೆಗೆ ಬಾಳೆ ಮತ್ತು ಭತ್ತ ಬೆಳೆಯಲು ಸಾಧ್ಯವಾಗಿರಬಹುದು. ಭತ್ತ ಹೆಚ್ಚು ನೀರು ಬಯಸುವ ಬೆಳೆ. ಬಾಳೆಯನ್ನು ಅಡಿಕೆ ಗಿಡಕ್ಕೆ ನೆರಳಾಗಿ ಇರಲಿ ಎಂಬ ಉದ್ದೇಶಕ್ಕೆ ರೈತರು ಹಚ್ಚುತ್ತಾರೆ.

ವೈಜ್ಞಾನಿಕವಾಗಿ ನೋಡಿದಾಗ ಅಡಿಕೆ ಜೊತೆಗೆ ಬೆಳೆದ ಬಾಳೆಯ ಇಳುವರಿ ಕಡಿಮೆ ಇರುತ್ತದೆ. ಕೆಲವು ಗದ್ದೆಗಳು ಬಾಳೆಗೆ ಸೂಕ್ತವಲ್ಲ. ಎಲ್ಲ ಜಮೀನುಗಳಲ್ಲಿ ಮಿಶ್ರಬೆಳೆ ತೆಗೆಯಲು ಸಾಧ್ಯವಿಲ್ಲ. ಬೆಳೆ ಹಾಕುವ ಮೊದಲು ಜಮೀನಿನ ಮಣ್ಣುನ್ನು ಕೃಷಿ ಅಧಿಕಾರಿಗಳಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ಅಧಿಕಾರಿ ಸೋಮಶೇಖರ್ ಸಲಹೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.