ADVERTISEMENT

ಅಣೆಕಟ್ಟು ನಿರ್ಮಾಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:23 IST
Last Updated 23 ಮೇ 2017, 6:23 IST

ಸಾಗರ:  ತಾಲ್ಲೂಕಿನ  ಸೀತಾಕಟ್ಟೆ ಸೇತುವೆ ಬಳಿ ಸರ್ವಋತು ಜೋಗ ಜಲಪಾತ ಯೋಜನೆಯಡಿ ನೂತನ ಅಣೆಕಟ್ಟು ನಿರ್ಮಿಸುವುದನ್ನು ವಿರೋಧಿಸಿ ಪಡಂಬೈಲುವಿನ ಸೀತಾಕಟ್ಟೆ ಅಣೆಕಟ್ಟು ವಿರೋಧಿ ಸಮಿತಿ ಸದಸ್ಯರು ಸೋಮವಾರ ಉಪವಿಭಾಗಾಧಿಕಾರಿ  ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಾಹಿತಿ ನಾ.ಡಿಸೋಜ , ವರ್ಷದ 365 ದಿನವೂ ಜೋಗ ಜಲಪಾತದಲ್ಲಿ ನೀರು ಹರಿಯುವಂತೆ ಮಾಡಲಾಗುವುದು ಎಂಬ ಸರ್ವಋತು ಜೋಗ ಜಲಪಾತ ಯೋಜನೆಯೇ ಅವೈಜ್ಞಾನಿಕ. ಸರ್ಕಾರ ಈ ಯೋಜನೆಯ ಉಪಯುಕ್ತತೆಯ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಸೀತಾಕಟ್ಟೆ ಬಳಿ ಅಣೆಕಟ್ಟು ನಿರ್ಮಾಣವಾದರೆ ಜೋಗಿನಮಠ, ತಾರಿಬಾಗಿಲು, ಪಡಂಬೈಲು, ಗೋರೆಗದ್ದೆ, ಕಾನುತೋಟ, ಹೊನಗೋಡು, ಕೊರಕೋಡು, ಗಿಳಾಲಗುಂಡಿ, ಚಿಪ್ಪಳಮಕ್ಕಿ, ಇಡುವಾಣಿ ಗ್ರಾಮದ ವ್ಯಾಪ್ತಿಗೆ ಬರುವ 100ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗುತ್ತವೆ. ಈ ಕುಟುಂಬಗಳು ಈಗಾಗಲೇ ಒಮ್ಮೆ ಮುಳುಗಡೆಯ ಕಾರಣಕ್ಕೆ ನಿರಾಶ್ರಿತರಾಗಿರುವ ಸಂತ್ರಸ್ತರೇ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಮತ್ತೊಂದು ‘ಮುಳುಗಡೆ’ ಸಮಸ್ಯೆ ಸೃಷ್ಟಿಸಲು ಮುಂದಾಗಿದೆ ಎಂಬ ಅನುಮಾನ ಕಾಡುತ್ತಿದೆ. ಜೋಗ ಜಲಪಾತ ಹಾಗೂ ಅದರ ಸುತ್ತಮುತ್ತಲ ಪ್ರದೇಶವನ್ನು ಖಾಸಗಿ ಕಂಪೆನಿಯ ನಿರ್ವಹಣೆಗೆ ನೀಡುವುದು ಪ್ರವಾಸಿಗರ ಪಾಲಿಗೆ ಮುಂದಿನ ದಿನಗಳಲ್ಲಿ ಬಿಸಿ ತುಪ್ಪವಾಗಲಿದೆ’ ಎಂದು ಹೇಳಿದರು.
‘ಸೀತಾಕಟ್ಟೆ ಪ್ರದೇಶದಲ್ಲಿ ನೀರು  ಶೇಖರಣೆಯಾಗಲು ಅಗತ್ಯವಿರುವಷ್ಟು ಸ್ಥಳಾವಕಾಶ ಇಲ್ಲ. ಆದರೂ ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ತಡೆಗೋಡೆ ನಿರ್ಮಿಸಿ ನೀರನ್ನು ಮೇಲೆತ್ತುವ ಯೋಜನೆಯೆ ಅವಾಸ್ತವಿಕ’ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಮಾತನಾಡಿ, ‘ಸೀತಾಕಟ್ಟೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಜನ ವಸತಿ ಇದೆ ಎನ್ನುವ ಅಂಶವನ್ನು ಸರ್ಕಾರಕ್ಕೆ ಎಸ್‌ಟಿಜಿ ಪ್ರಾಜೆಕ್ಟ್‌ ಎಂಬ ಸಂಸ್ಥೆ ನೀಡಿರುವ ವರದಿಯಲ್ಲಿ ಮರೆಮಾಚಲಾಗಿದೆ. ಅಳಿವಿನ ಅಂಚಿನಲ್ಲಿರುವ ಸಸ್ಯ, ಪ್ರಾಣಿ ಪಕ್ಷಿಗಳ ಬಗ್ಗೆ ವರದಿಯಲ್ಲಿ ಉಲ್ಲೇಖವಿದ್ದು ಮನುಷ್ಯರು ವಾಸವಾಗಿರುವ ಬಗ್ಗೆ ಪ್ರಸ್ತಾಪವೇ ಮಾಡದೆ ಇರುವುದು ವಾಸ್ತವ ಸಂಗತಿಗೆ ದೂರವಾಗಿದೆ’ ಎಂದರು.

ಪರಿಸರ ಕಾರ್ಯಕರ್ತ ಅಖಿಲೇಶ್‌ ಚಿಪ್ಪಳಿ ಮಾತನಾಡಿ, ಸ್ಥಳೀಯರ ಅಭಿಪ್ರಾಯ ಪಡೆಯದೆ, ಸತ್ಯಾಂಶಗಳನ್ನು ಮರೆಮಾಚಿ ಸೀತಾಕಟ್ಟೆ ಅಣೆಕಟ್ಟು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಪರಿಸರಕ್ಕೆ ಮಾರಕವಾದ ಯೋಜನೆ ಎಂದರು.

ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್‌ ವೀನಸ್‌ ಪ್ರವೀಣ್‌,   ಸಮಿತಿಯ ಅಧ್ಯಕ್ಷ ಗಣೇಶ್‌, ಕಾರ್ಯದರ್ಶಿ ಸಂತೋಷ್, ಫ್ರಾನ್ಸಿಸ್‌ ಡಯಾಸ್‌, ಪಾತ್ರೋನ್‌ ಫರ್ಟಾಡೊ, ಫ್ರಾನ್ಸಿಸ್‌ ಫರ್ಟಾಡೊ, ಸುರೇಶ್‌ ಎನ್‌, ಶ್ರೀನಿವಾಸ್, ಶ್ರೀಕಾಂತ್ ಶಾನುಭಾಗ್‌, ಹೆನ್ರಿ, ರುಜಾರಿಯಾ ಡಯಾಸ್‌, ಸತ್ಯನಾರಾಯಣ, ರಮೇಶ್‌  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.