ADVERTISEMENT

ಅರ್ಹತಾ ಪರೀಕ್ಷೆ ರದ್ದುಗೊಳಿಸಲು ಆಗ್ರಹ

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರು ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:26 IST
Last Updated 2 ಫೆಬ್ರುವರಿ 2017, 6:26 IST
ಅರ್ಹತಾ ಪರೀಕ್ಷೆ ರದ್ದುಗೊಳಿಸಲು ಆಗ್ರಹ
ಅರ್ಹತಾ ಪರೀಕ್ಷೆ ರದ್ದುಗೊಳಿಸಲು ಆಗ್ರಹ   
ಶಿವಮೊಗ್ಗ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಮುಗಿದ ನಂತರ ನಡೆಸಲು ಉದ್ದೇಶಿಸಿರುವ ಅರ್ಹತಾ ಪರೀಕ್ಷೆಯನ್ನು (ಕಲಿಕೆಯ ನಿರ್ಗಮನ ಪರೀಕ್ಷೆ) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಬುಧವಾರ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಸಿಮ್ಸ್ ಮತ್ತು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
 
ಕೇಂದ್ರ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಮುಗಿದ ನಂತರ ಮತ್ತೊಂದು ಅರ್ಹತಾ ಪರೀಕ್ಷೆ ‘ನೆಕ್ಸ್ಟ್‌’ (ಎನ್ಇಎಕ್ಸ್‌ಟಿ) ನಡೆಸಲು ಉದ್ದೇಶಿಸಿದೆ. ಈ ಪರೀಕ್ಷೆ ಅವೈಜ್ಞಾನಿಕವಾಗಿದ್ದು ವಿದ್ಯಾರ್ಥಿಗಳಿಗೆ ಸೂಕ್ತವಾಗುವುದಿಲ್ಲ. ಇದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
 
ಎಂಬಿಬಿಎಸ್ ಪದವಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ಸಾಕಷ್ಟು ಶ್ರಮಪಟ್ಟು ಶಿಕ್ಷಣ ಪಡೆದಿರುತ್ತಾರೆ. ಹೀಗಾಗಿ ಕಲಿಕೆಯ ನಂತರ ನಿರ್ಗಮನ ಪರೀಕ್ಷೆ ನಡೆಸುವುದು ಅನವಶ್ಯಕ. ಈ ಪರೀಕ್ಷೆ ನಡೆಸುವುದೇ ನಿಶ್ಚಿತವಾದರೆ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣ ಪದ್ಧತಿಯಲ್ಲಿ ಸರ್ಕಾರಕ್ಕೆ ಅನುಮಾನವಿದೆ ಎಂಬಂತಾಗುತ್ತದೆ. ದೇಶದಲ್ಲಿ 462 ಮೆಡಿಕಲ್ ಕಾಲೇಜುಗಳಿದ್ದು, ಪ್ರತಿ ವರ್ಷ 57 ಸಾವಿರ ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ ಎಂದು ತಿಳಿಸಿದರು.
 
ರಾಜ್ಯದಲ್ಲಿಯೇ 56 ಮೆಡಿಕಲ್ ಕಾಲೇಜುಗಳಿದ್ದು, ಪ್ರತಿ ವರ್ಷ 7,400 ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಪಡೆದು ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಕೇಂದ್ರ ಸರ್ಕಾರ ಇದೀಗ ಮಸೂದೆ ಜಾರಿಗೊಳಿಸುವ ನಿಟ್ಟಿನಲ್ಲಿ ಮುಂದಾಗಿರುವುದು ಸಮರ್ಪಕ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
‘ನೆಕ್ಸ್ಟ್‌’ ಪರೀಕ್ಷೆಯಲ್ಲಿ ಅನುತ್ತೀರ್ಣ ಆದವರು ಇನ್ನೂ ಒಂದು ವರ್ಷ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ. ಇದು ಇನ್ನಷ್ಟು ದುಬಾರಿ. ವಿದ್ಯಾರ್ಥಿಯ ಮನಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ವೈದ್ಯರಾಗಿ ಅಭ್ಯಾಸ ಮಾಡಲೂ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ತರಾತುರಿಯ ತೀರ್ಮಾನ ಪ್ರಕಟಿಸಿ, ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಬಾರದು ಎಂದು ಒತ್ತಾಯಿಸಿದರು.
 
ಭಾರತೀಯ ವೈದ್ಯಕೀಯ ಪರಿಷತ್ 2016ರಲ್ಲಿ ಮಂಡಿಸಿದ ತಿದ್ದುಪಡಿ ಮಸೂದೆಯನ್ನು ಸಾರ್ವಜನಿಕ ಅಭಿಪ್ರಾಯ ಪಡೆದ ನಂತರವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
 
ವೈದ್ಯಕೀಯ ವಿದ್ಯಾರ್ಥಿಗಳು ಸ್ನಾತಕೋತ್ತರ ವಿಷಯಗಳಿಗೆ ಪ್ರವೇಶ ಪಡೆಯಲು ಇದೀಗ ಜಾರಿಯಲ್ಲಿರುವ ನೀಟ್ ಪರೀಕ್ಷೆಯನ್ನೇ ಮುಂದುವರಿ ಸಬೇಕು. ಇದರಿಂದ ಎಲ್ಲ ವರ್ಗದ ಪ್ರತಿಭಾವಂತರಿಗೆ ಪ್ರವೇಶ ಪಡೆಯಲು ಅವಕಾಶ ದೊರೆಯುತ್ತದೆ. ಆದ್ದರಿಂದ ಯಾವ ಬದಲಾವಣೆ ಮಾಡುವುದೂ ಬೇಡ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
 
ಜಿಲ್ಲಾಡಳಿತದ ಮೂಲಕ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಧ್ಯಕ್ಷ ಡಾ.ಶಿವಯೋಗಿ, ಡಾ.ವಾಣಿ ಕೋರಿ, ವಿದ್ಯಾರ್ಥಿ ಮುಖಂಡ ಪ್ರಜ್ವಲ್ ಸೇರಿದಂತೆ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.