ADVERTISEMENT

ಆಗ ಇಟ್ಟು ಕೆಟ್ಟೆವು, ಈಗ ಕೊಟ್ಟು ಕೆಟ್ಟೆವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:03 IST
Last Updated 20 ಏಪ್ರಿಲ್ 2017, 5:03 IST
ತೀರ್ಥಹಳ್ಳಿಯ ಕೆಂಪಡಿಕೆ.
ತೀರ್ಥಹಳ್ಳಿಯ ಕೆಂಪಡಿಕೆ.   

ತೀರ್ಥಹಳ್ಳಿ: ‘ಕಳೆದ ಬಾರಿ ಇಟ್ಟು ಕೆಟ್ಟೆವು, ಈ ಸಾರಿ ಕೊಟ್ಟು ಕೆಟ್ಟೆವು’ ಎಂಬ ಮಾತು ತಾಲ್ಲೂಕಿನ ತುಂಬ ಹರಿದಾಡುತ್ತಿದೆ. ಹೋದಲ್ಲಿ, ಬಂದಲ್ಲಿ ಅಡಿಕೆ ಬೆಲೆ ಏರುಗತಿ ಕಂಡ ಬಗ್ಗೆಯೇ ರೈತರು ಮಾತಾಡಿಕೊಳ್ಳುತ್ತಿದ್ದಾರೆ.ಅಡಿಕೆ ಧಾರಣೆ ಕೊಂಚ ಏರಿಕೆ ಕಂಡಿದ್ದರಿಂದ ಬೆಳೆಗಾರರಲ್ಲಿ ಹೊಸ ಚೈತನ್ಯ ಕಂಡುಬರುತ್ತಿದೆ. ನೆಲಕಚ್ಚಿದ ಬೆಲೆ ಈಗ ಚೇತರಿಸಿಕೊಂಡಿದೆ. ಆದರೆ, ಬಹತೇಕ ರೈತರು ಅಡಿಕೆಯನ್ನು ಹಿಂದಿನ ಬೆಲೆಗೇ ಮಾರಾಟ ಮಾಡಿ ಕೈಸುಟ್ಟುಕೊಂಡಿದ್ದಾರೆ.

ಬೆಲೆ ಕುಸಿತ ಕಂಡಿದ್ದರಿಂದ ಅಡಿಕೆ ತೋಟಗಳತ್ತ ಮುಖ  ಮಾಡದ ರೈತರು ಈಗ ಬೆಲೆ ಏರಿಕೆ ಹಿನ್ನೆಲೆಯಲ್ಲಿ ತೋಟದ ಆರೈಕೆಗೆ ಮುಂದಾಗಿದ್ದಾರೆ. 2014ರ ಸಾಲಿನಲ್ಲಿ ಅಡಿಕೆ ಬೆಲೆ ಜುಲೈ ತಿಂಗಳಿನಲ್ಲಿ ಪ್ರತಿ ಕ್ವಿಂಟಲ್‌ಗೆ₹ 80 ಸಾವಿರ ದಾಟಿತ್ತು. ಆನಂತರದ ವರ್ಷಗಳಲ್ಲಿ ಒಂದೇ ಸಮನೆ ಕುಸಿತ ಕಂಡ ಬೆಲೆ ಮತ್ತೆ ಚೇತರಿಸಿ ಕೊಂಡಿರಲಿಲ್ಲ. ಈಗ ಬೆಲೆ ಏರಿಕೆ ಹಾದಿಯಲ್ಲಿದೆ. ಆದರೆ, ಸಣ್ಣ, ಅತಿ ಸಣ್ಣ ಬೆಳೆಗಾರರಲ್ಲಿ ಅಡಿಕೆ ದಾಸ್ತಾನು ಇಲ್ಲದಂತಾಗಿದೆ. ಬೆಲೆ ಏರಿದಾಗ ಬಹುತೇಕ ಶ್ರೀಮಂತ ಅಡಿಕೆ ಬೆಳೆಗಾರರಿಗೆ ಮಾತ್ರ ಅನುಕೂಲ ವಾಗುತ್ತದೆ.  ಬೆಲೆ ಬಂದಾಗ ಅಡಿಕೆ ಕೈಯಲ್ಲಿ ಇಲ್ಲವಲ್ಲ ಎಂಬ ಕೊರಗು ಸಣ್ಣ ರೈತರನ್ನು ಕಾಡುತ್ತದೆ.

2014ರ ಜುಲೈನಲ್ಲಿ ನಿರೀಕ್ಷೆಗೂ ಮೀರಿ ಏರುಗತಿ ಕಂಡಿದ್ದ ಅಡಿಕೆ ಬೆಲೆಯಿಂದಾಗಿ ರೈತರು ಮುಂದಿನ ವರ್ಷ ಇದೇ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅಡಿಕೆಯನ್ನು ದಾಸ್ತಾನು ಇಟ್ಟುಕೊಂಡಿ ದ್ದರು. ಆದರೆ, ನಂತರದ ದಿನಗಳಲ್ಲಿ ಅಡಿಕೆ ಬೆಲೆ ನಿರಂತರ ಕುಸಿತ ಕಂಡಿತು. ಕಡಿಮೆ ಬೆಲೆಗೆ ಮಾರಲೇ ಬೇಕಾದ ಅನಿವಾರ್ಯತೆ ಮಧ್ಯಮ ಹಾಗೂ ಸಣ್ಣ ಬೆಳೆಗಾರರಿಗೆ ಎದುರಾಯಿತು.ಈಗ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಸರಕು ಪ್ರತಿ ಕ್ವಿಂಟಲ್‌ಗೆ ₹ 42,000-₹ 59,000 ಸಾವಿರ ಇದೆ. ಬೆಟ್ಟೆ ₹ 41,000 – ₹ 51,000, ಇಡಿ ₹ 34,000 – ₹ 45,000 ಹಾಗೂ ಗೊರಬಲು ₹ 20,000 – ₹ 26,000ಕ್ಕೆ ವ್ಯಾಪಾರವಾಗುತ್ತಿದೆ.

ADVERTISEMENT

ವಾರಕ್ಕೆ ಒಮ್ಮೆ ವ್ಯಾಪಾರ ನಡೆಯುವ ತೀರ್ಥಹಳ್ಳಿ ಎಪಿಎಂಸಿಯಲ್ಲಿ   ಈಗ 22,865 ಮೂಟೆ ಅಡಿಕೆ ದಾಸ್ತಾನಿದೆ.  12,398 ಮೂಟೆ ವ್ಯಾಪಾರವಾಗಿದೆ.  ಕಳೆದ ಬಾರಿಗೆ ಹೋಲಿಸಿದಲ್ಲಿ ಈ ವಾರ್ಷಿಕ ಸಾಲಿನಲ್ಲಿ ಅಡಿಕೆ ದಾಸ್ತಾನು ಕಡಿಮೆ ಇದೆ ಎನ್ನುತ್ತಾರೆ ಎಪಿಎಂಸಿ ಸಿಬ್ಬಂದಿ.ಜಿಲ್ಲೆಯ ಪ್ರಮುಖಮಾರುಕಟ್ಟೆಗಳಲ್ಲಿ  ತೀರ್ಥಹಳ್ಳಿಯ ದೇಸಾವರಿ ತಳಿ ಅಡಿಕೆಗೆ ಬಹಳಷ್ಟು ಬೇಡಿಕೆ ಇದೆ.  ಅಡಿಕೆ ಮಾರುಕಟ್ಟೆ ವಹಿವಾಟು ಈ ಹಿಂದೆ ತೀರ್ಥಹಳ್ಳಿಯಲ್ಲಿ ಇಲ್ಲದ ಕಾರಣ ಇಲ್ಲಿನ ಬಹುತೇಕ ರೈತರು ಅಡಿಕೆಯನ್ನು ಶಿವಮೊಗ್ಗದ ಮಂಡಿಗೆ ಕಳುಹಿಸಿ ವ್ಯಾಪಾರ ಮಾಡುತ್ತಿದ್ದರು. ಸಾಗಾಟದ ವೆಚ್ಚ ಈಗ ಕಡಿಮೆ ಇರುವ ಕಾರಣ ಹಾಗೂ ಶಿವಮೊಗ್ಗ ಮಾರುಕಟ್ಟೆಯಲ್ಲಿ ಬಿಕರಿಯಾಗುವ ದರಕ್ಕೆ ಇಲ್ಲಿನ ಅಡಿಕೆ ವ್ಯಾಪಾರವಾಗುತ್ತಿರುವುದರಿಂದ ಹೆಚ್ಚಿನ ರೈತರು ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದಾರೆ. ಹಾಗಾಗಿ ಇಲ್ಲಿನ ಎಪಿಎಂಸಿ ಪ್ರಮುಖ ಅಡಿಕೆ ಮಾರಾಟ ಕೇಂದ್ರವಾಗಿ  ಪರಿವರ್ತನೆಗೊಳ್ಳುವಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.