ADVERTISEMENT

ಇಂಗ್ಲಿಷ್ ವ್ಯಾಮೋಹ ತೊರೆದು ಕನ್ನಡ ಉಳಿಸಿ

ಈಸೂರು: ಅಂಜನಾಪುರ ಹೋಬಳಿಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಕಾಳೇಶಪ್ಪ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 29 ಮೇ 2017, 4:40 IST
Last Updated 29 ಮೇ 2017, 4:40 IST
ಶಿಕಾರಿಪುರ: ಇಂಗ್ಲಿಷ್ ಭಾಷೆ ವ್ಯಾಮೋಹ ತೊರೆದು ಮಾತೃ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಸಾಹಿತಿ ಕಾಳೇಶಪ್ಪ ಸಲಹೆ ನೀಡಿದರು. 
ತಾಲ್ಲೂಕಿನ ಈಸೂರು ಗ್ರಾಮದ ಸಾರ್ವಜನಿಕ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಂಜನಾಪುರ ಹೋಬಳಿ ಘಟಕ ಭಾನುವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
 
ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಕ್ಕೆ ಇಳಿದಿದೆ. ಇಂಗ್ಲಿಷ್ ಶ್ರೇಷ್ಠ ಎಂದು ಪ್ರಚಾರಕ್ಕಿಳಿದಿವೆ. ಇದರಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. 
 
ಕನ್ನಡ ಭಾಷೆ ಬೆಳವಣಿಗೆ ದೃಷ್ಟಿಯಿಂದ ಸಮೂಹ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಖಾಸಗಿ ವಾಹಿನಿಗಳು ಪ್ರಸಾರ ಮಾಡುವ ಧಾರಾವಾಹಿಗಳಲ್ಲಿ ನಟ–ನಟಿಯರು ಇಂಗ್ಲಿಷ್ ಬಳಸುವ ಬದಲು ಕನ್ನಡವನ್ನು ಬಳಸಿದರೆ ವೀಕ್ಷಕರ ಮನಸ್ಸಿನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರೀತಿ, ಅಭಿಮಾನ ಮೂಡುತ್ತದೆ ಎಂದು ಸಲಹೆ ನೀಡಿದರು.
 
‘ಕನ್ನಡ ಭಾಷೆ ಒಂದು ಸಂಸ್ಕೃತಿಯಾಗಿದೆ. ನಮ್ಮ ಮನೆಯಲ್ಲಿ ಕನ್ನಡ ದಿನಪತ್ರಿಕೆ ಹಾಗೂ ನಿಯತಕಾಲಿಕೆ ತರಿಸಿ ಓದಬೇಕು. ಕನ್ನಡ ನಾಡು–ನುಡಿ ಹಾಗೂ ಸಾಧಕರ ಬಗ್ಗೆ ಅಭಿಮಾನದಿಂದ ಮಾತನಾಡಬೇಕು’ ಎಂದರು. 
 
ಸಮ್ಮೇಳನ ಉದ್ಘಾಟಿಸಿದ ಶಾಸಕ ಬಿ.ವೈ. ರಾಘವೇಂದ್ರ, ‘ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಭಾಷೆ ಉಳಿದಾಗ ಮಾತ್ರ ಕನ್ನಡ ನಾಡು ಉಳಿಯುತ್ತದೆ. ಪ್ರಥಮ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡ ಈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.
 
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಶಂಕರಪ್ಪ, ‘ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸುತ್ತಿದೆ. ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಮಾಡುತ್ತಿದೆ’ ಎಂದರು. 
 
ಕನ್ನಡ ಸಾಹಿತ್ಯ ಪರಿಷತ್ತು ಅಂಜನಾಪುರ ಹೋಬಳಿ  ಘಟಕ ಅಧ್ಯಕ್ಷ ಅಶೋಕ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಅರುಂಧತಿ ರಾಜೇಶ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪರಮೇಶ್ವರಪ್ಪ, ಸದಸ್ಯ ಜಯಣ್ಣ,  ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಎಸ್‌.ಆರ್‌.ಕೃಷ್ಣಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತನುಜಾ ಸುರೇಶ್‌, ಟಿಎಪಿಸಿಎಂಎಸ್‌ ನಿರ್ದೇಶಕ ಬಿ.ಡಿ. ಭೂಕಾಂತ್‌, ಚುರ್ಚಿಗುಂಡಿ ಶಶಿಧರ, ಎಂ.ಎನ್‌. ಸುಂದರ್‌ರಾಜ್, ಕಾನೂರು ಮಲ್ಲಿಕಾರ್ಜುನ್‌, ಪದಾಧಿಕಾರಿಗಳಾದ ಮಂಜಾಚಾರ್‌, ಗುರುರಾಜ್‌ ಜಕ್ಕಿನಕೊಪ್ಪ, ಜಯಣ್ಣ, ಬಿ.ಬಿ. ಕೊಪ್ಪದ್‌, ಮಲ್ಲೇಶ್‌ ಹೆಗಡೆ, ತೀರ್ಥಪ್ರಸನ್ನ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.