ADVERTISEMENT

ಇಂದು ಪಾದಯಾತ್ರೆ ಸಮಾರೋಪ, ಬಹಿರಂಗ ಸಭೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:39 IST
Last Updated 8 ನವೆಂಬರ್ 2017, 9:39 IST

ಶಿವಮೊಗ್ಗ/ಶಿಕಾರಿಪುರ: ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ, ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಸೊರಬ ಕುಬಟೂರಿನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜೆಡಿಎಸ್‌ ಹಮ್ಮಿಕೊಂಡಿರುವ ಪಾದಯಾತ್ರೆ ಮಂಗಳವಾರ ಶಿವಮೊಗ್ಗ ತಾಲ್ಲೂಕು ಪ್ರವೇಶಿಸಿತು.
ಸೊರಬ ಶಾಸಕ ಮಧು ಬಂಗಾರಪ್ಪ ನೆೇತೃತ್ವದಲ್ಲಿ ನ. 5ರಂದು ಆರಂಭವಾಗಿದ್ದ ‘ಅನ್ನದಾತನ ಕಣ್ಣೀರು’ ಪಾದಯಾತ್ರೆಯ ಮೂರನೇ ದಿನವೂ ಸಾವಿರಾರು ರೈತರು ಭಾಗವಹಿಸಿದ್ದರು.

ಇಂದು ನಗರಕ್ಕೆ ಎಚ್‌ಡಿಕೆ: ನ. 8 ರಂದು ಹಮ್ಮಿಕೊಂಡಿರುವ ಪಾದಯಾತ್ರೆ ಸಮಾರೋಪದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸುತ್ತಿದ್ದಾರೆ. ನ.5 ರಂದು ಸೊರಬದ ಕುಬಟೂರಿನಿಂದ ಶಿವಮೊಗ್ಗದವರೆಗೆ ಹಮ್ಮಿಕೊಂಡಿದ್ದ 118 ಕಿ.ಮೀ ಪಾದಯಾತ್ರೆ ಬುಧವಾರ ಸಂಜೆ 4ಕ್ಕೆ ಇಲ್ಲಿನ ಎನ್‌ಇಎಸ್‌ ಮೈದಾನದಲ್ಲಿ ತಲುಪಲಿದೆ. ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

50 ಸಾವಿರ ಜನ ಸೇರುವ ನಿರೀಕ್ಷೆ:‌ ಸಮಾರೋಪ ಸಮಾರಂಭದ ಪೂರ್ವಭಾವಿ ತಯಾರಿ ನಡೆದಿದ್ದು, ಸಮಾರೋಪ ಸಮಾರಂಭಕ್ಕೆ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ 40 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಅಂತಿಮ ಹಂತದ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ.

ADVERTISEMENT

ಈಸೂರಿನಿಂದ ಆಯನೂರುವರೆಗೆ: ಶಿಕಾರಿಪುರ ವರದಿ: ಶಿಕಾರಿಪುರ ಪಟ್ಟಣದಿಂದ ಸೋಮವಾರ ಹೊರಟ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ರೈತರು ಹಾಗೂ ಜೆಡಿಎಸ್‌ ಮುಖಂಡರು ರಾತ್ರಿ ಈಸೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಬೆಳಿಗ್ಗೆ ಹೊರಟ ಪಾದಯಾತ್ರೆ ಚುರ್ಚಿಗುಂಡಿ, ಹಿತ್ತಲ, ಕಲ್ಮನೆ, ಚೌಡಿಹಳ್ಳಿ, ದೇವರಹಳ್ಳಿ ಮಾರ್ಗವಾಗಿ ಸಂಜೆಯ ವೇಳೆಗೆ ಚೋರಡಿ ಪ್ರವೇಶಿಸಿತು.

ಪಾದಯಾತ್ರೆ ನೇತೃತ್ವ ವಹಿಸಿದ್ದ ಜೆಡಿಎಸ್‌ ರಾಜ್ಯ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ಹಾಗೂ ಮುಖಂಡ ಎಚ್‌.ಟಿ. ಬಳಿಗಾರ್‌ ಅವರಿಗೆ ವಿವಿಧ ಗ್ರಾಮಗಳಲ್ಲಿ ಮುಖಂಡರು ಹೂವಿನ ಮಾಲೆ ಹಾಕುವ ಮೂಲಕ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ, ಕುಂಕುಮದ ತಿಲಕ ಹಚ್ಚಿ ಶುಭಕೋರಿದರು.

ಪಾದಯಾತ್ರೆ ಸಂಚರಿಸುವಾಗ ರೈತ ಗೀತೆಗಳಿಗೆ ರೈತರು ಹಾಗೂ ಯುವಕರು ಕುಣಿಯುತ್ತ ಹೆಜ್ಜೆ ಹಾಕಿದರು. ಜೆಡಿಎಸ್‌ ಚಿಹ್ನೆ ಪ್ರತೀಕವಾಗಿ ಮಹಿಳೆಯೊಬ್ಬರು ತೆನೆ ಹೊತ್ತು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮುಖಂಡರಾದ ವೀರೇಶ್‌ ಕೊಟಗಿ, ಎಂ.ಬಿ. ಶೇಖರ್, ಗಣಪತಿ, ಜಡೆ ಈರಪ್ಪ, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.