ADVERTISEMENT

ಇತಿಹಾಸ ನಿರ್ಮಿಸಲಿದೆ ಬಾದಾಮಿ ಫಲಿತಾಂಶ

ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪಾತ್ರ ಭವಿಷ್ಯ: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:27 IST
Last Updated 26 ಏಪ್ರಿಲ್ 2018, 13:27 IST
ಡಾ.ಸಂಬಿತ್ ಪಾತ್ರ
ಡಾ.ಸಂಬಿತ್ ಪಾತ್ರ   

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಬಾದಾಮಿಯಿಂದಲೂ ಸ್ಪರ್ಧಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪಾತ್ರ ಲೇವಡಿ ಮಾಡಿದರು.

ಕಾಂಗ್ರೆಸ್ ಆತ್ಮವಿಶ್ವಾಸ ಕಳೆದು ಕೊಂಡಿದೆ. ಕಾಂಗ್ರೆಸ್‌ ಮುಖಂಡರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಹೊರಟಿದ್ದಾರೆ. ಬಾದಾಮಿ ಐತಿಹಾಸಿಕ ಕ್ಷೇತ್ರ. ಈ ಬಾರಿಯ ಫಲಿತಾಂಶವೂ ಇತಿಹಾಸ ನಿರ್ಮಿಸುತ್ತದೆ. ಎರಡು ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸೋಲನು ಭವಿಸಲಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಭವಿಷ್ಯ ನುಡಿದರು.

ಜೆಡಿಎಸ್‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಕೇವಲ ಶಿಕಾರಿ ಪುರದಲ್ಲಿ ಮಾತ್ರ ಕಣಕ್ಕೆ ಇಳಿದಿದ್ದಾರೆ. ಇದು ಬಿಜೆಪಿ ಆತ್ಮವಿಶ್ವಾಸಕ್ಕೆ →ಸಾಕ್ಷಿ ಎಂದರು.ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಎರಡು →ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಪಕ್ಷದ ಕಾರ್ಯತಂತ್ರದ ಭಾಗ ಎಂದು ಸಮರ್ಥಿಸಿಕೊಂಡರು.

ADVERTISEMENT

ನುಡಿದಂತೆ ನಡೆಯದ ಸರ್ಕಾರ:  ರಾಜ್ಯದಲ್ಲಿ ಸಮರ್ಪಕ ಮಳೆ ಬೀಳದೆ 160 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿತ್ತು. ಕೇಂದ್ರ ಸರ್ಕಾರ ನೀರಾವರಿ ಯೋಜನೆಗೆ ₹ 5,456 ಕೋಟಿ ಬಿಡುಗಡೆ ಮಾಡಿತ್ತು. ಆ ಹಣ ಎಲ್ಲಿಗೆ ಹೋಗಿದೆ? ಕೃಷ್ಣ ಜಲಾನಯನ ಪ್ರದೇಶದಲ್ಲಿ ₹ 50 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಆದರೆ ವಿನಿಯೋಗಿಸಿದ್ದು ಕೇವಲ ₹ 6,996 ಕೋಟಿ ಮಾತ್ರ ಎಂದು ಕಳವಳ ವ್ಯಕ್ತಡಿಸಿದರು.

ಬೆಂಗಳೂರು ದೇಶದ ಪ್ರಮುಖ ನಗರ. ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ. ರಸ್ತೆಗಳ ದುರಸ್ತಿ ಸಾಧ್ಯವಾಗಿಲ್ಲ. ಉಕ್ಕಿನ ಸೇತುವೆ ನಿರ್ಮಾಣದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಲು ಮುಂದಾಗಿದ್ದರು. ಅದರಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಪಾಲು ಎಷ್ಟಿತ್ತು? ಬೆಂಗಳೂರು ನಗರದ 10.7 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹ 468 ಕೋಟಿ ವಿನಿಯೋಗಿಸಲಾಗಿದೆ. ಇದು ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಮಂಗಳಾ ಗ್ರಹಕ್ಕೆ ಉಪಗ್ರಹ ರವಾನೆಗೆ ತಗುಲಿದ ವೆಚ್ಚ ₹460 ಕೋಟಿಗಿಂತ ಅಧಿಕ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅವಧಿಯಲ್ಲಿ 800ಕ್ಕೂ ಹೆಚ್ಚು ದಲಿತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ.750ಕ್ಕೂ ಹೆಚ್ಚು ಮಹಿಳೆಯರ ಹತ್ಯೆ, 350ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿವೆ. ರಾಜ್ಯದಲ್ಲಿ ನಡೆದ ಜನಾಂಗೀಯ ಕಲಹಗಳ ಅರಿವು ರಾಹುಲ್ ಗಾಂಧಿಗೆ ಇಲ್ಲವೇ? ಇಂತಹ ನೇತಾರರು ಸಂವಿಧಾನ ಬಚಾವೋ ಎಂದು ಕೂಗು ಹಾಕುತ್ತಿರುವುದು ಹಾಸ್ಯಾಸ್ಪದ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಎಸ್. ದತ್ತಾತ್ರಿ, ಬಿ.ಆರ್. ಮಧುಸೂದನ್, ಡಿ.ಎಸ್. ಅರುಣ್, ಸಿ. ಮಂಜುಳಾ, ಬಿಳಕಿ ಕೃಷ್ಣಮೂರ್ತಿ, ರತ್ನಾಕರ ಶೆಣೈ ಅವರೂ ಉಪಸ್ಥಿತರಿದ್ದರು.

ದೇಶದಲ್ಲಿ ಲೋಕಪಾಲ್ ಕಾಯ್ದೆ ಜಾರಿಯಾದೇ ಇರಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪಾತ್ರ ಆರೋಪಿಸಿದರು.

ಲೋಕಪಾಲ್‌ ಮಸೂದೆ ಕುರಿತು ಚರ್ಚಿಸಲು ಕರೆದ ಸಭೆಗೆ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬರಲಿಲ್ಲ. ಇದು ಕಾಂಗ್ರೆಸ್‌ನ ಇಬ್ಬಗೆಯ ನೀತಿ ತೋರಿಸುತ್ತದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಏ. 26ರಂದು ಆಂಕೋಲಕ್ಕೆ ರಾಹುಲ್‌ ಬರುತ್ತಿದ್ದಾರೆ. ಅವರು ಬಿಜೆಪಿ ಕೇಳಿರುವ 10 ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅದಕ್ಕಾಗಿ 10 ನಿಮಿಷ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದು ರೈತಪರ ಸರ್ಕಾರ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕೆಳೆದ ಐದು ವರ್ಷಗಳಲ್ಲಿ ಸುಮಾರು 3,781 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ರೈತರ ಆತ್ಮಹತ್ಯೆ ತಾಣ ಎಂದು ಬಿಂಬಿತವಾಗಿದೆ. ಕೃಷಿ ಅಭಿವೃದ್ಧಿಯ ಯಾವುದೇ ಕಾರ್ಯಕ್ರಮ ನೀಡಲಿಲ್ಲ. ಬದಲಾಗಿ ಖಜಾನೆ ಲೂಟಿ ಹೊಡೆಯಲಾಗಿದೆ. ಬರ ನಿರ್ವಹಣೆಗೆ ಕೇಂದ್ರ ನೀಡಿದ ಹಣ ಬಳಸಿಲ್ಲ. ಬೆಂಗಳೂರು ಅವ್ಯವಸ್ಥೆ ಸರಿಪಡಿಸಿಲ್ಲ. ಜನಾಂಗೀಯ ಕಲಹ ತಡೆಯಲು ಸಾಧ್ಯವಾಗಿಲ್ಲ. ನೀರಾವರಿ ಯೋಜನೆ ಅನುಷ್ಠಾನಗೊಳಿಸಿಲ್ಲ. ಈ ಕುರಿತು ರಾಹುಲ್ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.