ADVERTISEMENT

ಎಂಎಸ್‌ಐಎಲ್‌ ಮದ್ಯ ಮಾರಾಟ ಮಳಿಗೆ ಆರಂಭಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:48 IST
Last Updated 22 ಮಾರ್ಚ್ 2018, 12:48 IST

ಸಾಗರ: ತಾಲ್ಲೂಕಿನ ಕಾನ್ಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲವೆ ವೃತ್ತದಲ್ಲಿ ಎಂಎಸ್‌ಐಎಲ್‌ ಮದ್ಯದ ಮಳಿಗೆ ಆರಂಭಿಸಿರುವುದನ್ನು ವಿರೋಧಿಸಿ ಗ್ರಾಮ ಸುಧಾರಣಾ ಸಮಿತಿ, ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘ ಹಾಗೂ ಸರಾಯಿ ವಿರೋಧಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮದ್ಯದ ಮಳಿಗೆಗೆ ಪ್ರತಿಭಟನಾಕಾರರು ಬೀಗ ಜಡಿದು ತಮ್ಮ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಶೇಖರ್ ಗಾಳಿಪುರ ಮಾತನಾಡಿ, ‘ಕೆಲವೆ ವೃತ್ತದಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಲು ಪರವಾನಗಿ ನೀಡಬಾರದು ಎಂದು ಹಿಂದೆಯೇ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಮಳಿಗೆ ತೆರೆಯಲು ಅನುಮತಿ ನೀಡಿರುವುದು ಜನವಿರೋಧಿ ನೀತಿಯಾಗಿದೆ’ ಎಂದರು.

ADVERTISEMENT

ಕೆಲವೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು, ಕೃಷಿ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ
ಜನರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಪ್ರದೇಶದಲ್ಲಿ ಮದ್ಯ ಮಾರಾಟ ಮಳಿಗೆ ಆರಂಭವಾದರೆ ಕುಡಿತದ ಚಟಕ್ಕೆ ಹೆಚ್ಚಿನವರು ಬಲಿಯಾಗಿ ಸಾಮಾಜಿಕ ಸ್ವಾಸ್ಥ್ಯ ಹದಗೆಡುವ ಅಪಾಯವಿದೆ ಎಂದು ಹೇಳಿದರು.

ಮದ್ಯ ಮಳಿಗೆಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಅನಂತ ಕೆಲವೆ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಹಿಂಡ್ಲೆಕೊಪ್ಪ, ದೇವರಾಜ್‌, ರಾಜಣ್ಣ, ನಾಗರಾಜ್‌ ಕೆಲವೆ, ಮಂಜು, ಮಹಾಬಲೇಶ್‌ ಮಂಡಗಳಲೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.