ADVERTISEMENT

‘ಎಂಪಿಎಂ ಕಾರ್ಖಾನೆಗೆ ಬಂಡವಾಳ ಹೂಡಿ’

ಸಚಿವರನ್ನು ಭೇಟಿ ಮಾಡಿದ ಮಾಜಿ ಶಾಸಕ ಸಂಗಮೇಶ್ವರ ನೇತೃತ್ವದ ಮುಖಂಡರ ನಿಯೋಗ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:55 IST
Last Updated 25 ಮೇ 2017, 5:55 IST

ಭದ್ರಾವತಿ: ‘ಎಂಪಿಎಂ ಕಾರ್ಖಾನೆಗೆ ತಕ್ಷಣ ಬಂಡವಾಳ ಹಾಕಿ ಉತ್ಪಾದನೆ ಆರಂಭಿಸಿ ಇಲ್ಲ ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳ ಕುರಿತು ಇತ್ಯರ್ಥ ಮಾಡಿ’ ಎಂದು ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ನೇತೃತ್ವದ ಕಾರ್ಮಿಕ ಮುಖಂಡರ ನಿಯೋಗ ಒತ್ತಾಯಿಸಿದೆ.

ಮಂಗಳವಾರ ಬೆಂಗಳೂರಿನಲ್ಲಿ ಸಚಿವ ಆರ್.ವಿ. ದೇಶಪಾಂಡೆ, ಕಾರ್ಮಿಕ ಸಚಿವ ಸಂತೋಷಲಾಡ್ ಅವರನ್ನು ಭೇಟಿ ಮಾಡಿ ಎಂಪಿಎಂ ಕುರಿತಾಗಿ ಸ್ಪಷ್ಟ ನಿಲುವು ಹಾಗೂ ಕಾರ್ಮಿಕರ ಬೇಡಿಕೆಗೆ ತಕ್ಕಂತೆ ಪರಿಹಾರ ನೀಡುವಂತೆ ಒತ್ತಾಯಿಸಿತು.

ಸಚಿವ ದೇಶಪಾಂಡೆ ಭೇಟಿ ಮಾಡಿದ ನಿಯೋಗ, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ನೀಡಲು ವಿಳಂಬ ಮಾಡುವುದು ಸರಿಯಲ್ಲ. ಸರ್ಕಾರ ಖಾಸಗೀಕರಣ ಪ್ರಕ್ರಿಯೆಗೆ ಮುಂದಾಗಿರುವುದು ಖಂಡನೀಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಚಿವರು ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಸಭೆ ಆಯೋಜನೆ ಮಾಡಿ ಎಂದು ಸೂಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು ಎಂದು ನಿಯೋಗ ‘ಪ್ರಜಾವಾಣಿ’ಗೆ ತಿಳಿಸಿದೆ.

ಅಧಿಕಾರಿಗಳ ಭೇಟಿ: ಎಂಪಿಎಂ ಕಾರ್ಖಾನೆ ಅಧ್ಯಕ್ಷ ಡಿ.ವಿ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ನವೀನರಾಜ್ ಸಿಂಗ್ ಅವರನ್ನು ಭೇಟಿ ಮಾಡಿದ ನಿಯೋಗ ಸಮಸ್ಯೆ ಬಗೆಹರಿಸುವಂತೆ ಚರ್ಚೆ ನಡೆಸಿತು.

ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯದಲ್ಲಿ ಯಾವುದೇ ಕಡಿತ ಮಾಡುವ ಪ್ರಶ್ನೆ ಇಲ್ಲ. ಬದಲಾಗಿ ಕಾನೂನುಬದ್ಧವಾಗಿ ಸಿಗಬೇಕಾದ ನೆರವನ್ನು ವಿತರಿಸುವ ಭರವಸೆ ನೀಡಿದ್ದಾರೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ ನಿಯೋಗಕ್ಕೆ ಭರವಸೆ ನೀಡಿ, 15 ದಿನದಲ್ಲಿ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ ಅವರ ನೇತೃತ್ವದ ನಿಯೋಗದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಸಿ.ಎಸ್. ಶಿವಮೂರ್ತಿ, ಬಾಬು, ರಾಜಪ್ಪ ಸೇರಿದಂತೆ ಇತರ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.