ADVERTISEMENT

ಎಲ್ಲಾ ನಗರಗಳೂ ಬಯಲುಶೌಚ ಮುಕ್ತ ಆಗಲಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 6:21 IST
Last Updated 7 ಜುಲೈ 2017, 6:21 IST

ಶಿವಮೊಗ್ಗ: ಜಿಲ್ಲೆಯ ನಗರ-– ಪಟ್ಟಣ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರದೇಶಗಳನ್ನು ಸೆಪ್ಟಂಬರ್ ಅಂತ್ಯದ ಒಳಗಾಗಿ ಸಂಪೂರ್ಣ ಬಯಲುಶೌಚ ಮುಕ್ತ ವಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಗತ್ಯವಿರುವ ಭಾಗಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ತ್ವರಿತವಾಗಿ ನಿರ್ವಹಿಸಬೇಕು. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಫಲಾನು ಭವಿಗಳಿಗೆ ಸೂಕ್ತ ತಾಂತ್ರಿಕ ನೆರವು ನೀಡಬೇಕು. ಶೀಘ್ರ ನಿರ್ಮಾಣಕ್ಕೆ ಅಗತ್ಯ ನೆರವು ನೀಡಬೇಕು. ಶೌಚಾಲಯಗಳಲ್ಲಿ ಸರಿಯಾದ ಗಾಳಿ, ಬೆಳಕು ಇರುವಂತೆ ನಿರ್ಮಿಸಬೇಕು ಎಂದು ತಾಕೀತು ಮಾಡಿದರು.

ಒಂದು ಮನೆಯಲ್ಲಿ ಎರಡು ಶೌಚಾ ಲಯ ನಿರ್ಮಿಸಲು ಯೋಜನೆಯಲ್ಲಿ  ಅವಕಾಶ ಇಲ್ಲ. ಎರಡು ಶೌಚಾಲಯ ಬೇಡಿಕೆ ಮರು ಪರಿಶೀಲಿಸಬೇಕು. ಬಯಲು ಶೌಚ ಮುಕ್ತಗೊಳಿಸುವ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು ಎಂದರು.

ADVERTISEMENT

ನಿಗದಿತ ಅವಧಿಯ ಒಳಗೆ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿಗಳ ಛಾಯಾಚಿತ್ರ ಮತ್ತಿತರ ದಾಖಲೆಗಳನ್ನು ನಿಯಮಿತವಾಗಿ ಆನ್‌ಲೈನ್‌ ಮೂಲಕ ಸಲ್ಲಿಸಬೇಕು ಎಂದು ಸೂಚಿಸಿದರು.

ಭದ್ರಾವತಿ ನಗರಸಭೆಯ 35 ವಾರ್ಡ್‌ಗಳಲ್ಲಿ  ಈಗಾಗಲೇ 15 ವಾರ್ಡ್‌ಗಳು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ. 776 ಶೌಚಾಲಯಗಳ ವಿವರ ಆನ್‌ಲೈನ್‌ನಲ್ಲಿ ದಾಖಲಿಸಲಾಗಿದೆ. 6 ಸಮುದಾಯ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರ ನೀಡಿದರು.

ಅಮೆಗತಿ ಮನೆಗಳ ನಿರ್ಮಾಣ: ಹಲವು ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ ಕಾರ್ಯ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ವಾಜಪೇಯಿ ವಸತಿ ಯೋಜನೆ ಅಡಿ ಮನೆಗಳ ನಿರ್ಮಾಣ ಕಾರ್ಯ ತ್ವರಿತಗೊಳಿಸಬೇಕು. 

ಕಾಮಗಾರಿ ಆರಂಭವಾಗದಿರುವ ಸ್ಥಳ ಗಳಲ್ಲಿ ಮುಂದಿನ ಹತ್ತು ದಿನಗಳ ಒಳಗಾಗಿ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಆರಂಭಿಸಿರುವ ಛಾಯಾ ಚಿತ್ರಗಳನ್ನು ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸಬೇಕು. ಫಲಾನುಭವಿಗಳು ಆರಂಭಿಕ ಹಂತದ ಅನುದಾನ ಪಡೆದು ಕಾಮಗಾರಿ ಸ್ಥಗಿತಗೊಳಿಸಿದ್ದರೆ, ಅಂಥ ಫಲಾನುಭವಿಗಳಿಂದ ಮರಳಿ ಹಣ ವಸೂಲು ಮಾಡಬೇಕು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.