ADVERTISEMENT

ಏತನೀರಾವರಿ ಯೋಜನೆಗೆ ಒತ್ತಾಯಿಸಿ ನಾಳೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 9:13 IST
Last Updated 10 ಸೆಪ್ಟೆಂಬರ್ 2017, 9:13 IST

ಶಿವಮೊಗ್ಗ: ತುಂಗಾ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ಸೆ. 11ರಂದು ಬೆಳಿಗ್ಗೆ 11ಕ್ಕೆ ಸಾಗರ ರಸ್ತೆಯ ತುಂಗಾ ಮೇಲ್ದಂಡೆ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದರು.

ಕಳೆದ ಜುಲೈ 14ರಿಂದ ತುಂಗಾ ಮೇಲ್ದಂಡೆ ಕಚೇರಿ ಎದುರು 19 ದಿನಗಳ ಕಾಲ ಧರಣಿ ನಡೆಸಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಆ. 31ರಂದು ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಹೇಳಿದ ಸಮಯ ಮುಗಿದರೂ ಸಹ ನೀರು ಹರಿಸಿಲ್ಲ. ಪ್ರತಿ ಬಾರಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಸುಳ್ಳು ಹೇಳುತ್ತಾ ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಗುತ್ತಿಗೆ ಒಪ್ಪಂದದ ಪ್ರಕಾರ 2015ರ ಆಗಸ್ಟ್ ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕಾಗಿತ್ತು. ಆದರೆ, 2017ನೇ ಜನವರಿ ತಿಂಗಳಿನಿಂದಲೂ ಪ್ರತಿಭಟನೆ, ಧರಣಿ ನಡೆಸಿದಾಗಲೂ ಅಧಿಕಾರಿಗಳು 2017ರ ಜೂನ್ ಅಂತ್ಯಕ್ಕೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿದರು.

ADVERTISEMENT

ಕಳೆದ ಎರಡು ವರ್ಷಗಳಿಂದ ಬರಗಾಲವಿದೆ. 7,310 ಎಕರೆ ನೀರಾವರಿ ಅನುಕೂಲ ಪಡೆಯುವ ಹಾರ‍್ನಹಳ್ಳಿ ಮತ್ತು ಆಯನೂರು ಹೋಬಳಿಯ ಸುತ್ತಲಿನ ಗ್ರಾಮಗಳಿಗೆ ತಕ್ಷಣ ನೀರು ನೀಡಿದರೆ ಜಾನುವಾರಿಗೆ ಮತ್ತು ಮೇವಿನ ಕೊರತೆ ನೀಗಿಸಬಹುದು.

ಆದರೆ, ಯೋಜನೆ ವಿಫಲವಾಗಲು ಎಂಜಿನಿಯರ್‌ಗಳು, ಗುತ್ತಿಗೆದಾರರು ಕಾರಣರು. ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ಕೂಡಲೇ ವಜಾ ಮಾಡಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಆಗ್ರಹಿಸಿದರು. ರೈತ ಮುಖಂಡ ಕಡಿದಾಳು ಶಾಮಣ್ಣ, ಹಿಟ್ಟೂರು ರಾಜು, ಕೆ. ರಾಘವೇಂದ್ರ, ಎಸ್.ಶಿವಮೂರ್ತಿ, ಟಿ.ಎಂ.ಚಂದ್ರಪ್ಪ, ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.