ADVERTISEMENT

ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:40 IST
Last Updated 21 ಜನವರಿ 2017, 5:40 IST
ಶಿವಮೊಗ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡವರಿಗೆ ಹಕ್ಕುಪತ್ರ ವಿತರಿಸಿದರು
ಶಿವಮೊಗ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡವರಿಗೆ ಹಕ್ಕುಪತ್ರ ವಿತರಿಸಿದರು   

ಶಿವಮೊಗ್ಗ: ‘ರಾಜ್ಯ ಸರ್ಕಾರ ಕೇವಲ ಅಹಿಂದ ಪರವಲ್ಲ. ಎಲ್ಲ ಜಾತಿ, ಧರ್ಮಗಳ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜನರಿಗೆ ಕೊಟ್ಟ ಚುನಾವಣಾ ಭರವಸೆ, ಪ್ರಣಾಳಿಕೆಗಳ ಅಂಶಗಳನ್ನೇ ಬಜೆಟ್‌ನಲ್ಲಿ ಅಳವಡಿಸಿಕೊಂಡು 100ಕ್ಕೂ ಹೆಚ್ಚು ಯೋಜನೆ ಜಾರಿಗೆ ತರಲಾಗಿದೆ. ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 125 ಭರವಸೆ ಈಡೇರಿಸಲಾಗಿದೆ.  ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆ  ಚಾಚೂ ತಪ್ಪದೆ ಈಡೇರಿಸಿದ ಹೆಗ್ಗಳಿಕೆ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ’ ಎಂದರು.

ಉಳಿದ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಎಲ್ಲಾ ಜಾತಿ ವರ್ಗದ ಬಡವರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂದು  ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಎಲ್ಲ ಸಮು
ದಾಯದ ದುರ್ಬಲರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆ ಸಿಕ್ಕಾಗ ಸರ್ಕಾರದ ಉದ್ದೇಶ ಈಡೇರುತ್ತದೆ ಎಂದು ಅಭಿಪ್ರಾಯಪಟ್ಟರು.

‘ಸಮಾಜದಲ್ಲಿ ಸಮಾನತೆ ತರುವ ವಿಚಾರ ಹೊಸದಲ್ಲ. ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಸಂವಿಧಾನದಲ್ಲೂ ಅಳಡಿಸ
ಲಾಗಿದೆ. ಸಂವಿಧಾನದ ಆಶಯ ಜಾರಿಗೆ ತರುವುದು ಸರ್ಕಾರದ ಕರ್ತವ್ಯ. ಅದಕ್ಕೆ ನಮ್ಮ ಸರ್ಕಾರವೂ ಬದ್ಧವಾಗಿದೆ’ ಎಂದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಸ್ಥಳೀಯ ಶಾಸಕರು ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆ ತಂದಿ
ದ್ದಾರೆ. ಅವರ ಬೇಡಿಕೆಯಂತೆ ಜಿಲ್ಲೆಯ ಅಭಿವೃದ್ಧಿಯ ಎಲ್ಲ ಯೋಜನೆಗಳನ್ನೂ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯದ ರೈತರ ಕುರಿತು ಅಪಾರ ಕಾಳಜಿ ಇದೆ. ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ನಗರ ಮತ್ತು ಗ್ರಾಮಾಂತರ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕು ಪತ್ರ ನೀಡಬೇಕು. ಬಗರ್ ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡಬೇಕು, ವೈದ್ಯರ ನೇಮಕಾತಿ ಆಗಬೇಕು, ರೈತರಿಗೆ ಅರಣ್ಯ ಇಲಾಖೆ ಯಾವುದೇ ತೊಂದರೆ ನೀಡಬಾರದು ಎಂಬ ಅವರ ಎಲ್ಲ ಆಶಯಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ಗೋಮಾಳದ ಸಾಗುವಳಿದಾರರಿಗೂ ಭೂ ಹಕ್ಕು ನೀಡಲು ನಿರ್ಧರಿಸಲಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ನಾನು ಸಚಿವನಾದ ನಂತರ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿಕೊಂಡ ಎರಡು ಸಾವಿರ ಬಡವರಿಗೆ ಹಕ್ಕುಪತ್ರ ನೀಡಲಾಗಿದೆ. ಫೆ.21ರವರೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದೆ.  12 ಸಾವಿರ ಬಗರ್‌ಹುಕುಂ ಸಾಗುವಳಿ ಪತ್ರ ವಿತರಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆ ಅಡಿ ಸಲ್ಲಿಕೆಯಾದ 89  ಅರ್ಜಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಯೋಗ ಮೇಳದ ಲಾಂಚನ ಬಿಡುಗಡೆಗೊಳಿಸಿದರು. ಪ್ರಾಸ್ತಾವಿಕ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಹಳೇ ಕಾರಾಗೃಹ ಸ್ಥಳಾಂತರಗೊಂಡ ನಂತರ ಆ ಪ್ರದೇಶವನ್ನು ಸ್ವಾತಂತ್ರ್ಯ ಉದ್ಯಾನ
ವಾಗಿ ಅಭಿವೃದ್ಧಿಪಡಿಸಲು, ನಗರದ ಪಾರ್ಕ್‌ ಸಂರಕ್ಷಿಸಲು, ವಿಮಾನ ನಿಲ್ದಾಣ ಪೂರ್ಣಗೊಳಿಸಲು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಕೋರಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ,  ಕ್ರೀಡಾ ಸಚಿವ ಪ್ರಮೋದ ಮದ್ವರಾಜ್, ವಿಧಾನ ಪರಿಷತ್‌ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಕಾಡಾ ಅಧ್ಯಕ್ಷ ಸುಂದರೇಶ್, ಸೂಡಾ ಅಧ್ಯಕ್ಷ ಕೆ.ಎಂ.ಉಸ್ಮಾನ್, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್.ಕೆ.ಮರಿಯಪ್ಪ, ಜಿಲ್ಲಾಧಿಕಾರಿ ಎಂ.ಲೋಕೇಶ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್ ಕುಮಾರ್, ಎಸ್‌ಪಿ ಅಭಿನವ ಖರೆ ಉಪಸ್ಥಿತರಿದ್ದರು.

ಉದ್ಘಾಟಿಸಿದ ಕಾಮಗಾರಿಗಳು
ನಗರ ಪಾಲಿಕೆ ಆವರಣದಲ್ಲಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 11 ಅಡಿ ಎತ್ತರದ ಅಂಬೇಡ್ಕರ್‌ ಕಂಚಿನ ಪ್ರತಿಮೆ, ಗಾಂಧಿ ಪಾರ್ಕ್‌ನಲ್ಲಿ ನಿರ್ಮಿಸಿದ ₹ 23 ಲಕ್ಷ ವೆಚ್ಚದ 100 ಅಡಿ ಎತ್ತರದ ಧ್ವಜಸ್ತಂಭ, ಗೋಪಾಳದಲ್ಲಿ ನಿರ್ಮಿಸಿದ ₹ 6 ಕೋಟಿ ವೆಚ್ಚದ  ಕ್ರಿಡಾ ಸಂಕೀರ್ಣ, ತ್ಯಾವರೆಕೊಪ್ಪ ನಿರಾಶ್ರಿತರ
ಪರಿಹಾರ ಕೇಂದ್ರದಲ್ಲಿ ನಿರ್ಮಿಸಿದ₹ 1.90 ಕೋಟಿ ವೆಚ್ಚದ ಕಿರು ಆರೋಗ್ಯ ಕೇಂದ್ರ.

ಶಿಲಾನ್ಯಾಸ ಕಾಮಗಾರಿಗಳು:  ಗಾರ್ಡನ್‌ ಏರಿಯಾದಲ್ಲಿ ನಿರ್ಮಿಸುತ್ತಿರುವ ₹ 5.63 ಕೋಟಿ ವೆಚ್ಚದ ಹೂ, ಹಣ್ಣು, ತರಕಾರಿ ಮಾರುಕಟ್ಟೆ, ಮುಖ್ಯ ಬಸ್‌
ನಿಲ್ದಾಣದ ಬಳಿಯ ₹ 2 ಕೋಟಿ ವೆಚ್ಚದ ಪಾದಚಾರಿ ಮೇಲು ಸೇತುವೆ, ₹ 40 ಲಕ್ಷ ವೆಚ್ಚದಲ್ಲಿ ಸೋಮಿನಕೊಪ್ಪ ಉರ್ದು ಶಾಲೆ ಕಟ್ಟಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.