ADVERTISEMENT

ಕಾಂಗ್ರೆಸ್ ವಿವಿಧತೆಯಲ್ಲಿ ಏಕತೆ ಸಂಸ್ಕೃತಿಯನ್ನು ಉಳಿಸಿಕೊಂಡಿದೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 9:06 IST
Last Updated 17 ಅಕ್ಟೋಬರ್ 2017, 9:06 IST

ಶಿಕಾರಿಪುರ: ವಿವಿಧತೆಯಲ್ಲಿ ಏಕತೆ ಎಂಬ ದೇಶದ ಸಂಸ್ಕೃತಿಯನ್ನು ಕಾಂಗ್ರೆಸ್ ಉಳಿಸಿಕೊಂಡು ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕಿನ ಕಾಂಗ್ರೆಸ್‌ ಬೂತ್‌ ಕಮಿಟಿ ಅಧ್ಯಕ್ಷರು ಹಾಗೂ ಮುಖಂಡರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಜಾತಿ,ಧರ್ಮ,ಭಾಷೆ ಎಂಬ ಭೇದ ಭಾವ ಇಲ್ಲದೇ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿವು ನೀಗಿಸಲು ಅನ್ನಭಾಗ್ಯ ನೀಡಿರುವುದನ್ನು ಮತದಾರರಿಗೆ ತಿಳಿಸಬೇಕು. ಕ್ರಮಬದ್ಧವಾಗಿ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮವನ್ನು ಬೂತ್‌ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕು. ಪಕ್ಷವನ್ನು ಕೆಳಮಟ್ಟದಿಂದ ಗಟ್ಟಿಗೊಳಿಸುವ ಕೆಲಸ ನೀವು ಮಾಡಬೇಕು’ ಎಂದು ಸಲಹೆ ನೀಡಿದರು.

ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ,ಉದ್ಯೋಗ ಖಾತ್ರಿ ಯೋಜನೆಯ ₹ 15 ಸಾವಿರ ಕೋಟಿ ರಾಜ್ಯಕ್ಕೆ ನೀಡಿಲ್ಲ. ರಾಜ್ಯದ ಯಾವ ಬಿಜೆಪಿ ಸಂಸದರೂ ಉದ್ಯೋಗ ಖಾತ್ರಿ ಹಣ ನೀಡಬೇಕು ಎಂದು ಮೋದಿಗೆ ಮನವಿ ಮಾಡಿಲ್ಲ ಎಂದು ಟೀಕಿಸಿದರು.

ADVERTISEMENT

ಕಾಂಗ್ರೆಸ್‌ ವೀಕ್ಷಕ ಆ.ಗಾ. ಸುಲ್ತಾನ್‌ ಮಾತನಾಡಿ, ‘ನಮ್ಮ ಪಕ್ಷದ ನಾಯಕರಲ್ಲಿಯೇ ಪೈಪೋಟಿ ಬೇಡ,ನಾವೆಲ್ಲಾ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ಈ ಕ್ಷೇತ್ರದಲ್ಲಿ ಸಂಸದ ಯಡಿಯೂರಪ್ಪ ಅವರನ್ನು ಸೋಲಿಸಿ ಮನೆಗೆ ಕಳುಹಿಸಬಹುದು. ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವಾದ ಈಸೂರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಕರೆಸಿ ಚುನಾವಣಾ ಪ್ರಚಾರ ಆರಂಭಿಸೋಣ’ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕ ಅಧ್ಯಕ್ಷ ತೀ.ನಾ. ಶ್ರೀನಿವಾಸ್‌ ಮಾತನಾಡಿ, ‘ಕಾಂಗ್ರೆಸ್‌ ನಾಯಕರ ಮನೆ ಮೇಲೆ ದಾಳಿ ನಡೆಸಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳು ಮೊದಲು ಅಕ್ರಮ ಸಂಪತ್ತು ಸಂಗ್ರಹಿಸಿರುವ ಸಂಸದ ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಮನೆ ಮೇಲೆ ದಾಳಿ ನಡೆಸಲಿ’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ಆರ್. ಪ್ರಸನ್ನಕುಮಾರ್‌, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ವೀಕ್ಷಕ ನಾಗಚೂಡಯ್ಯ, ಮಾಜಿ ಶಾಸಕ ಎಚ್‌.ಎಂ. ಚಂದ್ರಶೇಖರಪ್ಪ, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಾಲತೇಶ್‌, ಮುಖಂಡರಾದ ಎಸ್‌.ಪಿ. ದಿನೇಶ್‌, ಎಚ್‌.ಪಿ. ನರಸಿಂಗನಾಯ್ಕ, ಹನುಮಂತಪ್ಪ, ಪಕ್ಕೀರಪ್ಪ, ದೇವಿಕುಮಾರ್‌, ಹುಲ್ಮಾರ್‌ ಮಹೇಶ್‌, ಕಪ್ಪನಹಳ್ಳಿ ಬಸವರಾಜಪ್ಪ, ನಗರದ ರವಿಕಿರಣ್‌, ಭಂಡಾರಿ ಮಾಲತೇಶ್, ದರ್ಶನ್‌, ಎ.ಬಿ. ಸುಧೀರ್‌, ಸುರೇಶ್‌ಧಾರಾವಾಡ, ಗಾಮ ದಯಾನಂದ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.