ADVERTISEMENT

ಕಾಮಗಾರಿಗೆ ಮರಳು ಪೂರೈಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:08 IST
Last Updated 18 ಫೆಬ್ರುವರಿ 2017, 5:08 IST
ತೀರ್ಥಹಳ್ಳಿ:  ‘ಸರ್ಕಾರದ ವಸತಿ ಹಾಗೂ ಶೌಚಾಲಯ ನಿರ್ಮಾಣದ ಕಾಮಗಾರಿಗೆ ತೊಂದರೆಯಾಗದಂತೆ ಮರಳು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು.
 
ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮರಳು ಕೊರತೆ ಉದ್ಭವಿಸದಂತೆ ಕಂದಾಯ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಹಿಸಬೇಕು’ ಎಂದು ಅಧಿಕಾರಿಗಳಿಗೆ  ಸೂಚಿಸಿದರು.
 
‘ಮರಳು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ವಸತಿ, ಶೌಚಾಲಯ ಕಾಮಗಾರಿ ಪ್ರಗತಿಗೆ ತೊಂದರೆ ಉಂಟಾಗಿದೆ. ಫಲಾನುಭವಿಗಳ ಬೇಡಿಕೆಗೆ ಸ್ಪಂದಿಸಿ ಮರಳು ಪೂರೈಸುವ ಅನುಮತಿ ನೀಡುವ ಅಧಿಕಾರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಿರ್ವಹಿಸಬೇಕು’ಎಂದರು.
 
‘ಅರ್ಹ ಫಲಾನುಭವಿಗಳು ಮರಳು ಸಾಗಣೆ ಮಾಡುವಾಗ ಅರಣ್ಯ, ಪೊಲೀಸ್‌, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಕಾರ ನೀಡಬೇಕು. ಮರಳು ಪೂರೈಕೆ ಸರಳೀಕರಣ ನಿರ್ಧಾರ ದುರುಪಯೋಗ ಆಗದಂತೆ ಎಲ್ಲಾ ಇಲಾಖೆಗಳು ಎಚ್ಚರವಹಿಸಬೇಕು. ದುರುಪಯೋಗಕ್ಕೆ ಅವಕಾಶ ನೀಡಿದರೆ ಸಂಬಂಧಪಟ್ಟವರು ಹೊಣೆ ಹೊರಬೇಕು’ ಎಂದು ಕಿಮ್ಮನೆ ರತ್ನಾಕರ ಹೇಳಿದರು.
 
ಸಭೆಯಲ್ಲಿ ತಹಶೀಲ್ದಾರ್‌ ಸತ್ಯನಾರಾಯಣ, ಡಿವೈಎಸ್‌ಪಿ ಗಣಪತಿ ಹೆಗಡೆ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಧನರಾಜ್‌, ಸಿಪಿಐ ಸುರೇಶ್‌, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜೇಶ್‌, ವಲಯ ಅರಣ್ಯಾಧಿಕಾರಿಗಳಾದ ಮಧುಸೂದನ್, ಮಹಮದ್‌ ಶಫಿ ಇತರರು ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.