ADVERTISEMENT

ಕೃಷಿ ಉಪಕರಣ ಸಬ್ಸಿಡಿ ಕಡಿತಕ್ಕೆ ಖಂಡನೆ

ಹುಲ್ಲು ಕೊಯ್ಯುವ ಯಂತ್ರ ವಿತರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಮೇ 2016, 9:57 IST
Last Updated 31 ಮೇ 2016, 9:57 IST

ಸಾಗರ: ಕೃಷಿ ಯಂತ್ರೋಪಕರಣಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಸರ್ಕಾರ ಕಡಿತ ಮಾಡುವ ಕ್ರಮ ಸರಿಯಲ್ಲ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

ಪಶು ವೈದ್ಯಕೀಯ ಇಲಾಖೆ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ತೀವ್ರ ಮೇವು ಅಭಿವೃದ್ಧಿ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಹುಲ್ಲು ಕೊಯ್ಯುವ ಯಂತ್ರವನ್ನು ವಿತರಿಸುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಪ್ರತಿವರ್ಷ ಪಶು ಸಂಗೋಪನಾ ಇಲಾಖೆಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಆದರೆ, ಈ ವರ್ಷ ಕೃಷಿ ಯಂತ್ರೋಪಕರಣಗಳ ಖರೀದಿಗೆ ರೈತರಿಗೆ ಹಾಗೂ ಕೃಷಿ ಆಧಾರಿತ ಉಪ ಕಸುಬು ನಡೆಸುವವರಿಗೆ ನೀಡುತ್ತಿದ್ದ ಸಬ್ಸಿಡಿ ಪ್ರಮಾಣವನ್ನು ಕಡಿತಗೊಳಸಿದ್ದು ಈ ಬಗ್ಗೆ ಸರ್ಕಾರ ತನ್ನ ತೀರ್ಮಾನ
ಮರು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.


ಪ್ರಸ್ತುತ ದಿನಗಳಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದರಿಂದ ಹೊರಬರಲು ಹಲವು ರೈತರು ವಿವಿಧ ರೀತಿಯ ಉಪಕಸಬುಗಳಲ್ಲಿ ತೊಡಗಿ ದ್ದಾರೆ. ಇವುಗಳಲ್ಲಿ ಪಶುಸಂಗೋಪನೆ ಕೂಡಾ ಒಂದಾಗಿದೆ. ಹೀಗಿರುವಾಗ ಉಪಕಸಬುಗಳಿಗೆ ಅಗತ್ಯವಿರುವ ನೆರವನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಪರಶುರಾಮ್ ಕೆ.ಎಚ್.ಮಾತನಾಡಿ ಕೃಷಿ ಆಧಾರಿತ ಉಪಕಸಬುಗಳನ್ನು ಕೈಗೊಳ್ಳುವವರಿಗೆ ಸರ್ಕಾರ ಉತ್ತೇಜನ ನೀಡದೆ ಇದ್ದರೆ ರೈತರು ಕೃಷಿಯಿಂದ ವಿಮುಖರಾಗುವ  ಅಪಾಯವಿದೆ ಎಂದರು.

ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಕಲ್ಲಪ್ಪ ಮಾತನಾಡಿ ತೀವ್ರ ಮೇವು ಅಭಿವೃದ್ಧಿ ಯೋಜನೆಯಡಿ 19 ಫಲಾನುಭವಿಗಳಿಗೆ ಶೇ 50ರ ರಿಯಾಯ್ತಿಯಲ್ಲಿ ಹುಲ್ಲು ಕೊಚ್ಚುವ ಯಂತ್ರವನ್ನು ವಿತರಿಸಲಾಗು ತ್ತಿದೆ. ಪಶುಭಾಗ್ಯ ಯೋಜನೆಯಡಿ 15, ಕುರಿ, ಮೇಕೆ ಸಾಕಾಣಿಕೆ ಯೋಜನೆಯಡಿ 23, ಅಮೃತ ಯೋಜನೆಯಡಿ ಹಸು ಸಾಕಾಣಿಕೆಗೆ 10 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿ ದರು. ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕಲಸೆ ಚಂದ್ರಪ್ಪ, ಸವಿತಾ ನಟರಾಜ್, ಹೇಮ ರಾಜಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಮಾಜಿ ಅಧ್ಯಕ್ಷ ಕೆ.ಹೊಳಿಯಪ್ಪ ಹಾಜರಿದ್ದರು.

ಸಾವಿತ್ರಮ್ಮ ಪ್ರಾರ್ಥಿಸಿದರು. ಎಂ.ಐ.ಭಟ್ ವಂದಿಸಿದರು. ಡಾ.ತಿಮ್ಮಪ್ಪ  ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.