ADVERTISEMENT

ಕೇರಳದಲ್ಲಿ ದೌರ್ಜನ್ಯ: ಬಿಜೆಪಿ ಪ್ರತಿಭಟನೆ

ಕಾನೂನು ಪಾಲನೆಗೆ ಗೃಹ ಇಲಾಖೆ ನಿಷ್ಪಕ್ಷಪಾತ ಕರ್ತವ್ಯ ನಿರ್ವಹಿಸಬೇಕು ಎಂದು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 5:21 IST
Last Updated 7 ಮಾರ್ಚ್ 2017, 5:21 IST
ತೀರ್ಥಹಳ್ಳಿ: ಕೇರಳದ ಕಣ್ಣೂರು ಜಿಲ್ಲೆಯಲ್ಲಿ  ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಸಿಪಿಎಂ ಕಾರ್ಯಕರ್ತರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸೋಮವಾರ ತೀರ್ಥಹಳ್ಳಿಯಲ್ಲಿ ಆರ್‌ಎಸ್‌ಎಸ್‌  ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
 
ಪಾಲಕ್ಕಾಡ್‌ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಕಮ್ಯುನಿಸ್ಟರ ರಾಜಕೀಯ ಪ್ರೇರಿತ ದಾಳಿಗೆ ನಾಗರಿಕರು ಬಲಿಯಾಗುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.
 
ಕೇರಳದಲ್ಲಿ ರಾಜಕೀಯ ಹಿಂಸಾಚಾರ ಮತ್ತು ಹತ್ಯೆಗಳು ನಡೆಯುತ್ತಿದ್ದು, ಆ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮುಖ್ಯಮಂತ್ರಿಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಇಲ್ಲಿಯವರೆಗೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
 
ಅಮಾಯಕ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಕಾರ್ಯಕರ್ತರ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಪೊಲೀಸರು ಕಮ್ಯುನಿಸ್ಟ್‌ ಗೂಂಡಾಗಳ ಕೈಗೊಂಬೆ ಯಂತೆ ವರ್ತಿಸುತ್ತಿರುವುದು ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎಲ್ಲಾ ಪ್ರಜೆಗಳಿಗೂ ಸುರಕ್ಷತೆ ಮತ್ತು ರಕ್ಷಣೆಯನ್ನು ಪೊಲೀಸ್‌ ಇಲಾಖೆ  ನೀಡಬೇಕು. ಕಾನೂನು ಪಾಲನೆಗೆ ಗೃಹ ಇಲಾಖೆ ನಿಷ್ಪಕ್ಷಪಾತ ಕರ್ತವ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
 
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ, ಆರ್‌ಎಸ್‌ಎಸ್‌ ಮುಖಂಡ ಭಾರತೀಪುರ ದಿನೇಶ್‌, ಪ್ರಮುಖರಾದ ನಾಗರಾಜಶೆಟ್ಟಿ, ಸಾಲೇ ಕೊಪ್ಪ ರಾಮಚಂದ್ರ, ಅಶೋಕಮೂರ್ತಿ, ಪ್ರಶಾಂತ್‌ ಕುಕ್ಕೆ ಮಾತನಾಡಿದರು. ತಹಶೀಲ್ದಾರ್‌ ಸತ್ಯನಾರಾಯಣ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.