ADVERTISEMENT

ಕ್ಷೀಣಿಸುತ್ತಿರುವ ಭತ್ತದ ಬೆಳೆ ಪ್ರದೇಶ

ತೀರ್ಥಹಳ್ಳಿ: ‘ಮಳೆ ಆಶ್ರಿತ ಭತ್ತದ ಕೃಷಿಯನ್ನು ಸದೃಢಗೊಳಿಸುವ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2016, 5:31 IST
Last Updated 9 ಮಾರ್ಚ್ 2016, 5:31 IST
ತೀರ್ಥಹಳ್ಳಿ ಸಮೀಪ ಕುಪ್ಪಳಿಯಲ್ಲಿ ಮಂಗಳವಾರ ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ  ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಮಾತನಾಡಿದರು.
ತೀರ್ಥಹಳ್ಳಿ ಸಮೀಪ ಕುಪ್ಪಳಿಯಲ್ಲಿ ಮಂಗಳವಾರ ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಮಾತನಾಡಿದರು.   

ತೀರ್ಥಹಳ್ಳಿ: ‘ರಾಜ್ಯದಲ್ಲಿ ಪ್ರತಿವರ್ಷ 40 ರಿಂದ 50 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವುದನ್ನು ಕೈ ಬಿಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಕಳವಳ ವ್ಯಕ್ತಪಡಿಸಿದರು.

ಮಂಗಳವಾರ ಸಮೀಪದ ಕುಪ್ಪಳಿಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಆಶ್ರಯದಲ್ಲಿ ನಡೆದ ‘ಮಳೆ ಆಶ್ರಿತ  ಭತ್ತದ ಕೃಷಿಯನ್ನು ಸದೃಢಗೊಳಿಸುವುದು’ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಲೆನಾಡು ಪ್ರಾಂತ್ಯದಲ್ಲಿ ಮಳೆ ಅಭಾವ ಆಗುತ್ತಿದೆ. ಕಾರ್ಮಿಕರ ಕೊರತೆ ಇದೆ. ರೋಗರುಜುನಗಳಿಂದ ಇಳುವರಿ ಕಡಿಮೆ ಆಗಿದೆ. ಇದು ಸ್ವಾಭಾವಿಕವಾಗಿದ್ದರೂ, ಇಳುವರಿ ಹೆಚ್ಚು ಮಾಡಲು ಕ್ರಮ, ಒಳ್ಳೆಯ ಬೇಸಾಯ ಪದ್ಧತಿ, ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಲು ಪ್ರಯತ್ನಿಸಬೇಕಾಗಿದೆ’ ಎಂದರು.

ಕಳೆದ 10 ವರ್ಷಗಳಲ್ಲಿ ರಾಜ್ಯದ 1.59 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಕಡಿಮೆಯಾಗಿದೆ. ವೈಜ್ಞಾನಿಕ ಹಾಗೂ ಒಟ್ಟು ಸಂಶೋಧನೆ
ಮೂಲಕ ಬೆಳೆ ಬೆಳೆಯಬೇಕಿದೆ. ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡುಕದೇ ಇದ್ದರೆ ಭತ್ತದ ಬೇಸಾಯ ಸೇರಿದಂತೆ ಒಣಬೇಸಾಯ ಉಳಿಯುವುದು ಕಷ್ಟ. ಕೇರಳದಲ್ಲಿ ಆದ ಪ್ರಯೋಗ ನಮ್ಮಲ್ಲಿ ಬಳಕೆಗೆ ಬಂದಿದ್ದೇ ಆದರೆ, ಅದರ ಉಪಯೋಗ ಸಿಕ್ಕಂತಾಗುತ್ತದೆ. ದೇಸೀ ತಳಿಯ ಜೀವವೈವಿಧ್ಯ ಇಲ್ಲಿನ ಭತ್ತದ ತಳಿಗಳಿಗಿದೆ. ಈ ಕುರಿತು ರಾಜ್ಯ, ದೇಶ ಚಿಂತಿಸಿದರೆ ಸಾಲದು ಜಗತ್ತೇ ಯೋಚಿಸಬೇಕಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಸ್ಯತಳಿ ಮತ್ತು ರೈತ ಹಕ್ಕು ಸಂರಕ್ಷಣಾ ಪ್ರಾಧಿಕಾರ ನವದೆಹಲಿ ಸಂಸ್ಥೆಯ ಮೂಲಕ ರಾಷ್ಟ್ರೀಯಮಟ್ಟದ ಒಂದು ಶಾಖೆಯನ್ನು ಪಶ್ಚಿಮಘಟ್ಟ ಪ್ರದೇಶವಾದ ಶಿಕಾರಿಪುರದಲ್ಲಿ ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಆಹಾರ ಪೂರಕ ಭದ್ರತೆಗೆ ಹೆಚ್ಚಿನ ಗಮನ ಕೊಡಬೇಕಿದೆ. ಈ ಕೆಲಸವನ್ನು ಕೃಷಿ ಬೆಲೆ ಆಯೋಗ ಮಾಡುತ್ತಿದೆ. ಸಂಸ್ಕೃತಿ, ಭಾಷೆ ಉಣ್ಣುವ ಆಹಾರದಿಂದ ತಿಳಿಯುತ್ತದೆ.  ಮಳೆ ಆಶ್ರಿತ ಭತ್ತ ರಾಜ್ಯದ ಆಹಾರ  ಧಾನ್ಯದಲ್ಲಿ ಸದೃಢ ಭದ್ರತೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ರೈತ ಮುಖಂಡ ಕೆ.ಟಿ.ಗಂಗಾಧರ್‌ ಮಾತನಾಡಿ, ‘ಮಲೆನಾಡಿನ ಭತ್ತದ ತಳಿಗಳಲ್ಲಿನ ಸತ್ವವನ್ನು ವಿಜ್ಞಾನಿಗಳ ಮೂಲಕ ನಗರ ಪ್ರದೇಶದ ಜನರಿಗೆ ತಿಳಿಸುವ ಕೆಲಸವನ್ನು ಕೃಷಿ ವಿಜ್ಞಾನಿಗಳು ಮಾಡಬೇಕು. ಮೂಲ ತಳಿ ಮತ್ತು ಜ್ಞಾನವನ್ನು ಮರೆತದ್ದು ಅಪಚಾರವಾಗಿದೆ.

ಸರ್ಕಾರದ ರೀತಿ, ನೀತಿಗಳು ಅಧೋಗತಿಗೆ ಕಾರಣವಾಗಿದೆ. ಕೃಷಿ ಭಾರತದ ಜನರಿಂದ ದೂರ ಆಗಬಾರದು. ಕೃಷಿ ಸಂಸ್ಕೃತಿ ಭಾರತೀಯ ಸಂಸ್ಕೃತಿ. ಮಾನವ ಕುಲವನ್ನು ಜೋಪಾನ ಮಾಡುವ ಸುಸಂಸ್ಕೃತಿ ಇಂದು ಹಳ್ಳಿಗಳಲ್ಲಿ ಉಳಿದಿದೆ. ಪಟ್ಟಣದಲ್ಲಿ ಇದು
ಅಗ್ರಿ ಬಿಸಿನೆಸ್‌ ಆಗಿದೆ. ನಾಡ ಸಂಸ್ಕೃತಿಯನ್ನು ರಕ್ಷಣೆ ಮಾಡುವುದರಿಂದ ನಾವು ತಪ್ಪಿಸಿಕೊಳ್ಳಬಾರದು’ ಎಂದರು.

ಇಂದಿನ ಯುವಕರು ಕೃಷಿಯನ್ನು ಲಾಭ ಮಾಡುವ ಕಡೆಗೆ ನೋಡುತ್ತಾರೆ.  ಸರ್ಕಾರದ ತಪ್ಪು ನಿರ್ಧಾರಗಳಿಂದ ಕೃಷಿಯನ್ನು ಬಲಿ ಕೊಡಬೇಕಾದ ಸಂದರ್ಭ ಎದುರಾಗಿದೆ. ಆಹಾರ ಉತ್ಪಾದನೆ ಮಾಡುವುದು ಕರ್ತವ್ಯ. ಅದಕ್ಕೆ ಬೆಲೆ ನಿಗಧಿ ಮಾಡುವ ಹಕ್ಕು ಯಾವಾಗಲೂ ಇದೆ.  ಜಗತ್ತಿನಲ್ಲಿ ಆಹಾರ ಸಂಬಂಧಿ ಕೈಗಾರಿಕೆಗಳೇ ದೊಡ್ಡದು. ಆಹಾರ ಉತ್ಪಾದನೆಯನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತೇವೆ ಎಂಬ ಇಚ್ಛಾಶಕ್ತಿ ಬೇಕು. ಅಗೋಚರ ಮಾರುಕಟ್ಟೆ ನಂಬಿ ಯಾವುದೇ ಬೆಳೆ ಬೆಳೆಯುವುದು ಅಪಾಯಕಾರಿ ಎಂದರು.
ಕಾರ್ಯಾಗಾರವನ್ನು ಪ್ರಗತಿಪರ ಕೃಷಿಕ ಕುಡುಮಲ್ಲಿಗೆ ಶ್ಯಾಮಶೆಟ್ಟಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕೇರಳದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ವಿ.ಜಯಕುಮಾರನ್‌,  ನಾಟಿ ಭತ್ತದ ತಳಿ ಕೃಷಿಕ ಮಿತ್ತಲಬಾಗಿಲು ದೇವರಾಯ ಮಾತನಾಡಿದರು.
ಕಾರ್ಯಾಗಾರದಲ್ಲಿ  ಮಳೆ ಆಶ್ರಿತ ಬೇಸಾಯ ಕುರಿತು ವಿವಿಧ ಗೋಷ್ಠಿಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.