ADVERTISEMENT

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:21 IST
Last Updated 16 ಮೇ 2017, 5:21 IST

ಶಿಕಾರಿಪುರ:  ತಾಲ್ಲೂಕಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಆದ್ಯತೆ ನೀಡಬೇಕು  ಎಂದು ಅಧಿಕಾರಿಗಳಿಗೆ ಶಾಸಕ ಬಿ.ವೈ. ರಾಘವೇಂದ್ರ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಲಾಭಪೇಕ್ಷೆ ಇಲ್ಲದೆ ಗುಣಮಟ್ಟದ ಕಾಮಗಾರಿ ನಡೆಸಬೇಕು. ಕಡಿಮೆ ಪ್ರಮಾಣದ ಅನುದಾನದ ಕಾಮಗಾರಿಗಳನ್ನು ನಿರ್ಲಕ್ಷಿಸದೇ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ಟಾಸ್ಕ್‌ ಫೋರ್ಸ್‌ ಹಾಗೂ ಗ್ರಾಮ ಪಂಚಾಯ್ತಿ ಸೇರಿದಂತೆ ಇತರೆ ಅನುದಾನದಲ್ಲಿ 340ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಿದ್ದು, ನೀರು ಸದ್ಬಳಕೆ ಯಾಗುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು  ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯೆ ಅಕ್ಷತಾ ಶ್ರೀನಿವಾಸ್‌ ಮಾತನಾಡಿ, ಕಣಸೋಗಿ ಗ್ರಾಮದಲ್ಲಿ ಸರ್ಕಾರದ ವೆಚ್ಚದಲ್ಲಿ ಕೊರೆಸಿದ ಕೊಳವೆಬಾವಿ ಮೂಲಕ ಗ್ರಾಮದ ಗುತ್ತಿಗೆದಾರನೊಬ್ಬ ತಮ್ಮ ತೋಟಕ್ಕೆ ನೀರು ಸರಬರಾಜು ಮಾಡಿಕೊಳ್ಳುತ್ತಿದ್ದಾನೆ. ಈ ರೀತಿ ನೀರು ದುರ್ಬಳಕೆ ಮಾಡಿಕೊಳ್ಳುವ ವ್ಯಕ್ತಿ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ‘ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೀರಿನ ದುರ್ಬಳಕೆ ತಡೆಗಟ್ಟಬೇಕು’ ಎಂದರು. ಕೆಡಿಪಿ ಸದಸ್ಯರು ಮಾತನಾಡಿ,   ಗ್ರಾಮಗಳ ಜನರಿಗೆ ಟ್ಯಾಂಕರ್‌ ಮೂಲಕ ಸಮರ್ಪಕವಾಗಿ ನೀರು ಸರಬರಾಜು ಮಾಡುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು. 

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್‌.ಪಿ. ನರಸಿಂಗನಾಯ್ಕ, ರೇಣುಕಾ ಹನುಮಂತಪ್ಪ, ಅರುಂಧತಿ ರಾಜೇಶ್‌, ಮಮತಾ ಸಾಲಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷೆ ರೂಪಾದಯಾನಂದ್‌, ಇಒ ಆನಂದಕುಮಾರ್‌, ತಹಶೀಲ್ದಾರ್‌ ಶಿವಕುಮಾರ್‌,, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

ಸಭೆಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ‘ಅರಣ್ಯ ಹಕ್ಕು ಪತ್ರ ಅರ್ಜಿ ಹಾಗೂ ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಶೀಘ್ರ  ವಿಲೇವಾರಿ ಮಾಡಬೇಕು.  ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಶ್ರಮಿಸಬೇಕು. ಕುಡಿಯುವ ನೀರು  ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ತಿಳಿಸಿ ಸಭೆಯಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.