ADVERTISEMENT

ಗ್ರಾಮೀಣ ಜನರಲ್ಲಿ ಚಿಂತೆ ಮೂಡಿಸಿದ ಚಿರತೆ

ಅಗ್ರಹಾರ, ಮಂಡಗದ್ದೆ ಹೋಬಳಿಯಲ್ಲಿ ಚಿರತೆ ಹಾವಳಿ: ಆಗುಂಬೆ ಭಾಗದಲ್ಲಿ ಕಾಡಾನೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 31 ಮೇ 2016, 10:04 IST
Last Updated 31 ಮೇ 2016, 10:04 IST

ತೀರ್ಥಹಳ್ಳಿ: ತಾಲ್ಲೂಕಿನ ಅಗ್ರಹಾರ, ಮಂಡಗದ್ದೆ ಹೋಬಳಿ ಗಡಿ ಭಾಗವಾದ ಕನ್ನಂಗಿ, ತ್ರಯಂಬಕಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು ಸಾರ್ವಜನಿಕರು ಭಯದ ನಡುವೆ ಕಾಲ ಕಳೆಯುಂತಾಗಿದೆ.

ರಾತ್ರಿ ಹೊತ್ತಿನಲ್ಲಿ ಬೈಕ್‌ ಸವಾರನ್ನು ಬೆನ್ನಟ್ಟಿ ಬರುವ ಚಿರತೆಯಿಂದ ತೊಂದರೆಗೆ ಒಳಗಾದ ಜನರು, ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಕನ್ನಂಗಿ ಹಾಗೂ ತ್ರಯಂಬಕಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಸಿಲ ಮನೆ, ದತ್ತರಾಜಪುರ, ನಾಗೇನಹಳ್ಳಿ, ಹಿತ್ತಲಗದ್ದೆ, ಜಡ್ಡಿನಗದ್ದೆ, ಕಾನುಮನೆ, ಲಿಂಗನಕೊಪ್ಪ, ಜಡ್ಡುಗದ್ದೆ, ಮಂಡಲ ಮನೆ, ಬಂಡಿಕೊಪ್ಪ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಿದೆ. ವಿದ್ಯಾರ್ಥಿ ಗಳು, ಹಿರಿಯರು, ಮಹಿಳೆಯರು ಆತಂಕದಲ್ಲೇ ಹೆಜ್ಜೆ ಹಾಕಬೇಕಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮರಿಹಾಕಿದ್ದ ಚಿರತೆಯೊಂದು ರಾತ್ರಿ ಹೊತ್ತಿನಲ್ಲಿ ಬೈಕ್‌ ಸವಾರರನ್ನು ಬಿಸಿಲುಮನೆ–ದತ್ತರಾಜಪುರ ರಸ್ತೆಯಲ್ಲಿ ಅಟ್ಟಿಸಿಕೊಂಡು ಬರುತ್ತಿದೆ. ಈ ಮಾರ್ಗವಾಗಿ ಸಂಚಾರ ನಡೆಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಬೈಸಿಕಲ್‌ ಮೂಲಕ ಶಾಲೆಗೆ ಹೋಗಲು ಒಪ್ಪುತ್ತಿಲ್ಲ. ಚಿರತೆ ಕಾಟದಿಂದ ಆತಂಕದ ನಡುವೆ ಕಾಲ ಕಳೆಯಬೇಕಾಗಿದೆ ಎಂದು ಈ ಭಾಗದ ಗ್ರಾಮಸ್ಥರು ದೂರಿದ್ದಾರೆ.

ಹಳ್ಳಿಗಳಿಗೆ ದಾಳಿ ಇಡುವ ಚಿರತೆ ಕರುಗಳು, ಜಾನುವಾರುಗಳನ್ನು ತಿನ್ನು ತ್ತಿವೆ. ಲಿಂಗನಕೊಪ್ಪ ಮಂಜು ಅವರಿಗೆ ಸೇರಿದ ಮೂರು ಕುರಿಗಳನ್ನು ಚಿರತೆ ತಿಂದು ಹಾಕಿದೆ. ಈ ಕುರಿತು ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಮರಿ ಹಾಕಿದ ಚಿರತೆಯೊಂದು ಸಾರ್ವಜನಿಕರ ಓಡಾಟಕ್ಕೆ ಅಡ್ಡಿ ಪಡಿಸುತ್ತಿದೆ. ರಾತ್ರಿ ಹೊತ್ತು ಬೈಕ್‌ ಸವಾರರನ್ನು ಬೆನ್ನಟ್ಟಿ ಬರುತ್ತದೆ. ಮನುಷ್ಯರ ಮೇಲೆ ದಾಳಿ ಮಾಡುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು ಕೊಂಡು ಪರಿಹಾರ ಕಂಡು ಕೊಳ್ಳುವುದು ಉತ್ತಮ’ ಎನ್ನುತ್ತಾರೆ ಸಂತೇಹಕ್ಕಲಿನ ನಾಗೇಂದ್ರ.


‘ಬೋನು ಇಡಲು ಕ್ರಮ’
‘ಚಿರತೆ ಹಾವಳಿ ಬಗ್ಗೆ ದೂರು ಬಂದಿದೆ. ಇಲಾಖೆಯ ಸಿಬ್ಬಂದಿಯನ್ನು ಆ ಭಾಗಕ್ಕೆ ಕಳುಹಿಸಿಕೊಡಲಾಗಿದೆ. ವನ್ಯಜೀವಿ ವಿಭಾಗದಿಂದ ಚಿರತೆ ಹಿಡಿಯಲು ಬೋನು ಇಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಭಾಗದಲ್ಲಿ ಕ್ಯಾಮೆರಾ ಟ್ರ್ಯಾಪ್‌ ಮಾಡಿಸಲಾಗುವುದು. ಆಗ
ಚಿರತೆ ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ಚಿರತೆ
ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಮಧುಸೂಧನ್‌ ತಿಳಿಸಿದ್ದಾರೆ.


ಆಗುಂಬೆ ಭಾಗದಲ್ಲಿ ಕಾಡಾನೆ ಸಂಚಾರ:

ತೀರ್ಥಹಳ್ಳಿ: ಆಗುಂಬೆ ಭಾಗದಲ್ಲಿ ಮತ್ತೆ ಆನೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಆನೆಯಿಂದ ಜನರು ಭಯಭೀತರಾಗಿದ್ದಾರೆ.
ಆಗುಂಬೆ ಸಮೀಪ ಅಗಸರಕೋಣೆ, ಮಲ್ಲಂದೂರು, ಹೊಸಗದ್ದೆ, ಕೌರಿಹಕ್ಕಲು  ಮುಂತಾದ ಕಡೆಗಳಲ್ಲಿ ಸಂಚರಿಸುತ್ತಿರುವ ಒಂಟಿ ಸಲಗ, ಈ ಭಾಗದ ರೈತರ ಜಮೀನಿಗೆ ದಾಳಿ ಇಡುತ್ತಿದೆ.
ನರಹಂತಕ ಒಂಟಿ ಸಲಗ ಎರಡು ವರ್ಷಗಳ ಹಿಂದೆ ಮಲ್ಲಂದೂರಿನಲ್ಲಿ ರೈತರೊಬ್ಬರನ್ನು ಸಾಯಿಸಿತ್ತು.
ಒಂಟಿ ಆನೆ ಸಂಚಾರ ಇರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಜನರು ಜಾಗೃತರಾಗಿರುವಂತೆ ಸೂಚಿಸಿದ್ದಾರೆ. ಕಾಡಿಗೆ ಹೋಗದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ ಎಂದು ಈ ಭಾಗದ ಜನರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.