ADVERTISEMENT

ಚಳವಳಿ ರೂವಾರಿಗಳಿಗೆ ‘ದಲಿತಪಟ್ಟ’ ಬೇಡ

ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಕುಂಸಿ ಉಮೇಶ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 4:59 IST
Last Updated 11 ಮಾರ್ಚ್ 2017, 4:59 IST
ಶಿವಮೊಗ್ಗ: ಸೂತಕ ಕಳೆದುಕೊಂಡು ಹೊರಬಂದ ವಚನಕಾರರಿಗೆ ಮತ್ತೆ ದಲಿತ ವಚನಕಾರರ  ಪಟ್ಟ ಕಟ್ಟುವುದರಲ್ಲಿ ಅರ್ಥವಿಲ್ಲ ಎಂದು ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ, ಸಾಹಿತಿ ಕುಂಸಿ ಉಮೇಶ್ ಪ್ರತಿಪಾದಿಸಿದರು.
 
ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
 
ದಲಿತ ಎಂಬ ಪದದ ಸ್ವರೂಪ ಇಂದು ಬೇರೆಯದೇ ಅರ್ಥ ಪಡೆಯುತ್ತಿದೆ. ಬಸವಣ್ಣನವರು ಎಲ್ಲರನ್ನೂ ದಲಿತತ್ವದಿಂದ ಆಚೆಗೆ ಕರೆದುಕೊಂಡು ಬಂದಿದ್ದಾರೆ. ಕೀಳರಿಮೆ ಕಳಚಿ, ಅವರ ಜತೆ ಇದ್ದು, ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಅವರ ಕುಲವನ್ನೇ ಬಸವಣ್ಣ ಮರೆಮಾಚಿಸಿದ್ದರು. ಆದರೆ, ನಾವು ಇಂದು 12ನೇ ಶತಮಾನದ ವಚನಕಾರರಲ್ಲೇ ಮತ್ತೆ ಗುಂಪು ಮಾಡುತ್ತಿರುವುದು  ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
 
ವಚನ ಚಳವಳಿ ಮೂಲಕ ನಾವು, ನಮ್ಮವರು ಎಂಬ ಬಹುತ್ವದ ವಿವೇಕ ಹೇಳಿಕೊಟ್ಟ ಈ ನೆಲದಲ್ಲಿ ಇಂದಿಗೂ ‘ನಾನು’ ಎಂಬ ಏಕ ಪ್ರಕಾರದ ಪ್ರಜ್ಞೆ ಮೂಡುತ್ತಿದೆ. ‘ನಾವೆಲ್ಲರೂ ಒಂದೇ’ ಎಂಬ ವಿವೇಕದ ಬಹುತ್ವವೇ ಕಣ್ಮರೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
 
12ನೇ ಶತಮಾನದಲ್ಲಿ ಕುಲ ಮತ್ತು ಕಾಯಕದ ಜತೆಯಲ್ಲಿಯೇ ನಡೆದ ಸಾಂಸ್ಕೃತಿಕ ಕ್ರಾಂತಿಗೆ ವಚನ ಚಳವಳಿ ಸಾಕ್ಷಿಯಾಗಿತ್ತು. 12ನೇ ಶತಮಾನದಲ್ಲಿ ಕೇವಲ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ದೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಊರಲಿಂಗ ಪೆದ್ದಿ ಎಂಬ ಐದು ಜನರಷ್ಟೇ ಇರಲಿಲ್ಲ. ಇನ್ನೂ ಹಲವಾರು ವಚನಕಾರು ಇದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಈ ಐದು ಜನರಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ. ಕುಲ ಮತ್ತು ವೃತ್ತಿಯ ಸಂಕೇತದಿಂದ ಅವರನ್ನು ಗುರುತಿಸಿರುವುದು ಒಂದು ವಿಶೇಷವಾಗಿದೆ ಎಂದರು.
 
ಅನುಭವ ಮಂಟಪದ ಹಲವು ದಲಿತ ವಚನಕಾರರು ತಮ್ಮ ಜಾತಿ, ಕುಲ ಕುರಿತು ಅಥವಾ ಬೇರೆ ಜಾತಿ ಧರ್ಮಗಳ ಕುರಿತು ವಚನ ರಚಿಸಿಲ್ಲ. ಜಗತ್ತಿನ ಮೌಢ್ಯ, ಅಸಹನೆ, ಸತ್ಯ ಕುರಿತು ನಿರ್ದಾಕ್ಷಿಣ್ಯವಾಗಿ ವಚನಗಳ ಮೂಲಕ ಹೇಳಿದ್ದಾರೆ ಎಂದು ಇತಿಹಾಸ ಮೆಲುಕು ಹಾಕಿದರು.
 
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ತಳ ಸಮುದಾಯಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಫೂರ್ತಿ ದೊರಕಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಲಿತ ವಚನಕಾರರ ಜಯಂತಿ ಆಚರಿಸುತ್ತಿದೆ. ಶೋಷಿತ ಸಮುದಾಯಗಳು ಸರ್ಕಾರದ ಅವಕಾಶ ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದರು.
 
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ದಲಿತ ವಚನಕಾರರ ಕುರಿತ ಕಿರುಹೊತ್ತಿಗೆ ಸಾಕಷ್ಟು ವಿವರ, ಮಾಹಿತಿ ಒಳಗೊಂಡಿದೆ. ಅದರ ಜತೆಗೆ, ದಲಿತ ವಚನಕಾರರ ವಚನಗಳನ್ನೂ ಮುದ್ರಿಸಿ ಪ್ರಚಾರಗೊಳಿಸಬೇಕು ಎಂದು ಸಲಹೆ ನೀಡಿದರು.
 
ಉಪ ವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಜಿ. ಹಿಮಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ.ನಾಯಕ್, ಮೇಯರ್ ಏಳುಮಲೈ ಉಪಸ್ಥಿತರಿದ್ದರು. ಆರ್. ನಾಗರತ್ನ ಮತ್ತು ಉಮಾದೇವಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.