ADVERTISEMENT

ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

ಕುವೆಂಪು ರಂಗಮಂದಿರದಲ್ಲಿ ಫೆ.4 ಮತ್ತು 5ರಂದು ನುಡಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:58 IST
Last Updated 31 ಜನವರಿ 2017, 5:58 IST
ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ
ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ   
ಶಿವಮೊಗ್ಗ: ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನವನ್ನು ಫೆ. 4 ಮತ್ತು 5ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
 
ಸಮ್ಮೇಳನ ನಿಮಿತ್ತ ರಾಷ್ಟ್ರಕವಿ ಕುವೆಂಪು ಮಹಾಮಂಟಪ, ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ  ಮಹಾ ವೇದಿಕೆ, ಪ್ರೊ.ಬಿ. ಕೃಷ್ಣಪ್ಪ ಮಹಾದ್ವಾರ ನಿರ್ಮಿಸಲಾಗುವುದು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಶಂಕರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
 
ಫೆ. 4ರಂದು ಬೆಳಿಗ್ಗೆ 8ಕ್ಕೆ ಶಾಸಕ ಕೆ.ಬಿ. ಪ್ರಸನ್ನಕುಮಾರ್ ರಾಷ್ಟ್ರಧ್ವಜಾರೋಹಣ, ಮೇಯರ್‌ ಎಸ್‌.ಕೆ.ಮರಿಯಪ್ಪ ನಾಡ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 8.30ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ವಿವಿಧ ಜನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುವುದು. ಜಿಲ್ಲಾಧಿಕಾರಿ ಡಾ. ಎಂ.ಲೋಕೇಶ್‌ ಮೆರವಣಿಗೆ ಉದ್ಘಾಟಿಸುವರು ಎಂದರು.
 
ಸಮ್ಮೇಳನ ಉದ್ಘಾಟನೆಗೆ ಭೈರಪ್ಪ: ಬೆಳಿಗ್ಗೆ 10.30ಕ್ಕೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸಮ್ಮೇಳನ ಉದ್ಘಾಟಿಸುವರು. ಸಂಸತ್‌ ಸದಸ್ಯ ಬಿ.ಎಸ್. ಯಡಿಯೂರಪ್ಪ ಆಶಯ ಮಾತು ಆಡುವರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್‌  ‘ತುಂಗ’ ಸ್ಮರಣಸಂಚಿಕೆ ಬಿಡುಗಡೆ ಮಾಡುವರು.
 
ಸಮ್ಮೇಳನದ ಸರ್ವಾಧ್ಯಕ್ಷ  ಡಾ.ಸಣ್ಣರಾಮ. ಸಾಹಿತಿ ನಾ. ಡಿಸೋಜ ಭಾಗವಹಿಸುವರು. ಮಧ್ಯಾಹ್ನ 1ರಿಂದ 5 ಕವಿಗೋಷ್ಠಿ ಆಯೋಜಿಸಲಾಗಿದೆ. ಸಂಜೆ 8ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸ ಲಾಗಿದೆ ಎಂದು ವಿವರ ನೀಡಿದರು.
 
ಫೆ. 5ರಂದು ಬೆಳಿಗ್ಗೆ 8.30ರಿಂದ ಸುಗಮ ಸಂಗೀತ, ಜನಪದ ಗೀತೆ ಹಾಗೂ ಭಾವಗೀತೆ ಗಾಯನ ನಡೆಯಲಿದೆ. ನಂತರ ಕವಿಗೋಷ್ಠಿ, ಮಹಿಳಾ ಗೋಷ್ಠಿ ಹಾಗೂ ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿವೆ. ಸಂಜೆ 6ಕ್ಕೆ ಸಮಾರೋಪ ಹಮ್ಮಿಕೊಳ್ಳಲಾಗಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕಿಮ್ಮನೆ ರತ್ನಾಕರ, ಸಾಹಿತಿ ಶ್ರೀಕಂಠ ಕೂಡಿಗೆ, ಸತ್ಯನಾರಾಯಣ ರಾವ್‌ ಅಣತಿ ಭಾಗವಹಿಸಲಿದ್ದಾರೆ. ಸಂಜೆ 8ರಿಂದ ಗೀತಗಾಯನ, ಚಂಡೆಮದ್ದಳೆ, ಚಮ್ಮಾವುಗೆ ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
 
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಖಜಾಂಚಿ ಎಸ್.ವಿ.ಚಂದ್ರಕಲಾ, ಕಾರ್ಯದರ್ಶಿ ರುದ್ರಮುನಿ ಎಸ್.ಸಜ್ಜನ್, ಸುಂದರರಾಜ್, ಮಲ್ಲಿಕಾರ್ಜುನ, ಗೋಪಜ್ಜಿ ನಾಗಪ್ಪ, ಬಸವರಾಜಪ್ಪ ಕಂದಗಲ್, ಸತೀಶ್ ಆಡಿನಸರ, ಈಶ್ವರಪ್ಪ ಉಪಸ್ಥಿತರಿದ್ದರು.
 
**
ಭೈರಪ್ಪ ಆಹ್ವಾನಕ್ಕೂ ಮೊದಲೇ ರಾಜೀನಾಮೆ!
ಎಸ್‌.ಎಲ್‌.ಬೈರಪ್ಪ ಅವರು ನಾಡಿನ ಹಿರಿಯ ಸಾಹಿತಿ. ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರ ಜತೆ ಚರ್ಚಿಸಿಯೇ ಅವರಿಗೆ ಆಹ್ವಾನ ನೀಡಲಾಗಿದೆ. ಶ್ರೀಕಂಠ ಕೂಡಿಗೆ ರಾಜೀನಾಮೆಗೂ ಭೈರಪ್ಪ ಅವರ ಆಹ್ವಾನಕ್ಕೂ ಸಂಬಂಧವಿಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ ಪ್ರತಿಕ್ರಿಯೆ ನೀಡಿದರು.
 
ತಾಲ್ಲೂಕು ಅಧ್ಯಕ್ಷರು ತಮ್ಮ ಮಾತಿಗೆ ಮನ್ನಣೆ ನೀಡಲಿಲ್ಲ ಎಂದು ಬೇಸರಗೊಂಡು ಕೂಡಿಗೆ ಅವರು ತಿಂಗಳ ಹಿಂದೆಯೇ ಸಲಹಾ ಸಮಿತಿಗೆ ರಾಜೀನಾಮೆ ನೀಡಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ ಹೇಳಿದರು.
 
ಸಮ್ಮೇಳನದ ಸರ್ವಾಧ್ಯಕ್ಷರಾದ  ಡಾ.ಸಣ್ಣರಾಮ ಅವರೂ ಭೈರಪ್ಪ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಸಮ್ಮೇಳನ ಉದ್ಘಾಟನೆಗೆ ಆಹ್ವಾನಿಸಲು ಒಪ್ಪಿದ್ದರು. ಸಾಹಿತ್ಯ ಪರಿಷತ್‌ ಯಾವುದೇ ಜಾತೀಯತೆ, ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ವಿರೋಧ ವ್ಯಕ್ತಪಡಿಸಿರುವ ಪ್ರಗತಿಪರರ ಜತೆಯೂ ಈ ಕುರಿತು ಚರ್ಚಿಸಲಾಗುವುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.