ADVERTISEMENT

ಜಿಲ್ಲೆಯ 8 ಸಾವಿರ ನೌಕರರಿಗೆ ಶೇ 5 ತೆರಿಗೆ ಲಾಭ

ಕೇಂದ್ರ ಬಜೆಟ್‌ಗೆ ನಾಗರಿಕರ ಮಿಶ್ರ ಪ್ರತಿಕ್ರಿಯೆ, ರಾಜ್ಯ ಬಜೆಟ್‌ನತ್ತ ಎಲ್ಲರ ಚಿತ್ತ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:28 IST
Last Updated 2 ಫೆಬ್ರುವರಿ 2017, 6:28 IST
ಜಿಲ್ಲೆಯ 8 ಸಾವಿರ ನೌಕರರಿಗೆ ಶೇ 5 ತೆರಿಗೆ ಲಾಭ
ಜಿಲ್ಲೆಯ 8 ಸಾವಿರ ನೌಕರರಿಗೆ ಶೇ 5 ತೆರಿಗೆ ಲಾಭ   
ಶಿವಮೊಗ್ಗ: ವಾರ್ಷಿಕ ₹ 2.5 ಲಕ್ಷದಿಂದ ₹ 5 ಲಕ್ಷದವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ ಕಡಿತ ಮಾಡಿರುವ ಪರಿಣಾಮ ಸರ್ಕಾರಿ ನೌಕರರೂ ಸೇರಿದಂತೆ ಸೀಮಿತ ಆದಾಯ ಹೊಂದಿರುವವರಿಗೆ ಕನಿಷ್ಠ ₹ 12,500 ಉಳಿತಾಯವಾಗಲಿದೆ.
 
ಜಿಲ್ಲೆಯಲ್ಲಿ 21 ಸಾವಿರ ಸರ್ಕಾರಿ ನೌಕರರು ಇದ್ದು, ಅವರಲ್ಲಿ ಶೇ 30ರಷ್ಟು ನೌಕರರು ₹ 5 ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ. ಕಳೆದ ಸಾಲಿನಲ್ಲಿ ₹ 2.5ರಿಂದ ₹ 5 ಲಕ್ಷದವರೆಗಿನ ಆದಾಯದ ಮೇಲೆ ಶೇ 10ರಷ್ಟು ತೆರಿಗೆ ನಿಗದಿ ಮಾಡಲಾಗಿತ್ತು.
 
ಗೃಹಸಾಲದಲ್ಲಿ ಗಣನೀಯ ಇಳಿಕೆ, ಕೃಷಿ ಸಾಲ ₹ 10 ಲಕ್ಷ ಕೋಟಿಗೆ, ಬೆಳೆವಿಮೆ ₹13,242 ಕೋಟಿಗೆ ಏರಿಕೆ ಮಾಡಿರುವುದು. ಪರಿಶಿಷ್ಟ ಜಾತಿಗಳ ಅನುದಾನ 53 ಸಾವಿರ ಕೋಟಿಗೆ ಹೆಚ್ಚಳ, ಮುದ್ರಾ ಯೋಜನೆಗೆ ₹ 2.44 ಲಕ್ಷ ಕೋಟಿ ಘೋಷಣೆ, 14 ಲಕ್ಷ ಅಂಗನವಾಡಿಗಳ ಸ್ಥಾಪನೆ, 50 ಸಾವಿರ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. 
 
ಜಿಲ್ಲೆಯ ನಾಗರಿಕರ ಅಭಿಮತ: ಸರ್ಕಾರದ ಸಾಲದ ಗಾತ್ರವನ್ನು ಈ ಬಾರಿ ₹ 4.40 ಲಕ್ಷ ಕೋಟಿಯಿಂದ ₹ 3 ಲಕ್ಷ ಕೋಟಿಗೆ ಇಳಿಕೆ ಮಾಡಿರುವುದು ದೇಶದ ಸಾಲದ ಹೊರೆ ತಗ್ಗಿಸಲಿದೆ. ಆದರೆ, ರೈತರು ಮತ್ತು ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಿತ್ತು ಎಂದು ಲೆಕ್ಕ ಪರಿಶೋಧಕ ಕೆ.ವಿ.ವಸಂತಕುಮಾರ್ ಅಭಿಪ್ರಾಯಪಟ್ಟರು.
 
ವೇತನ ಶ್ರೇಣಿ ಬದಲಾವಣೆಯ ಲಾಭ ಪಡೆದಿದ್ದ ನೌಕರರಿಗೆ ತೆರಿಗೆ ಕಡಿತ ವರದಾನವಾಗಿದೆ. ಹಾಗೆಯೇ, ರಾಜ್ಯ ಸರ್ಕಾರವೂ ನೌಕರರ ಬೇಡಿಕೆಗೆ ಬಜೆಟ್‌ ಮೂಲಕ ಸ್ಪಂದಿಸಬೇಕು ಎನ್ನುತ್ತಾರೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ.
 
ಬಜೆಟ್‌ಗೆ ಶ್ಲಾಘನೆ: ಬಜೆಟ್‌ಗೆ ಹಲವು ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. ಕೇಂದ್ರದ ಆರ್ಥಿಕ ಸುಧಾರಣಾ ಕ್ರಮಕ್ಕೆ ಶ್ಲಾಘಿಸಿದ್ದಾರೆ.
 
ಕೆಳ, ಮಧ್ಯಮ ವರ್ಗದ ಜನರಿಗೆ ಅನುಕೂಲ: ಎಲ್ಲ ಕ್ಷೇತ್ರಗಳ ಕೆಳ, ಮಧ್ಯಮ ವರ್ಷದ ಜನರಿಗೆ ಅನುಕೂಲ ವಾಗಿದೆ. ಶ್ರೀಮಂತರಿಗೆ ಯಾವುದೇ ರಿಯಾಯಿತಿ ನೀಡದಿರುವುದು ಸಂತಸದ ವಿಚಾರ. ಅದೇ ರೀತಿ ಸಣ್ಣ ಕೈಗಾರಿಕೆಗಳಿಗೆ ಮುದ್ರಾ ಬ್ಯಾಂಕ್‌ ಮೂಲಕ ಉತ್ತೇಜನ ನೀಡಲಾಗಿದೆ ಎಂದು ಆರ್ಥಶಾಸ್ತ್ರಜ್ಞ ಬಿ.ಎಂ. ಕುಮಾರಸ್ವಾಮಿ ಅಭಿಪ್ರಾಯ ತಿಳಿಸಿದರು.
 
ಆನ್‌ಲೈನ್‌ ವ್ಯವಹಾರಕ್ಕೆ ಉತ್ತೇಜನ: ಆರ್ಥಿಕ ಸುಧಾರಣೆಗೆ ಈ ಬಜೆಟ್‌ನಲ್ಲಿ ಸಾಕಷ್ಟು ಒತ್ತು ಸಿಕ್ಕಿದೆ. ₹ 3 ಲಕ್ಷ  ಅಧಿಕ ಮೊತ್ತದ ವಹಿವಾಟಿಗೆ ಕಡಿವಾಣ ಹಾಕಿ ಚೆಕ್, ಆನ್‌ಲೈನ್‌ ಮೂಲಕ ನಡೆಸಲು  ಒತ್ತು ನೀಡುವ ಕೆಲಸ ಮಾಡಲಾಗಿದೆ. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಮಿತಿ ₹ 2 ಸಾವಿರ ಮಿತಿಗೊಳಿಸಿರುವುದು ಸ್ವಾಗತಾರ್ಹ. ನೋಟು ರದ್ದತಿ ನಂತರ ಆರ್ಥಿಕ ವ್ಯವಸ್ಥೆಗೆ ಪುನಃಶ್ಚೇತನ ಗೊಳಿಸಲು ಹಲವು ಸುಧಾರಣಾ ಕ್ರಮಗಳ ಅನುಷ್ಠಾನ ಗೊಳಿಸಲಾಗಿದೆ. ಆರ್ಥಿಕ ವ್ಯವಹಾರದಲ್ಲಿ ಪಾರದರ್ಶಕತೆ ತರಲಾಗಿದೆ ಎಂದು ಉದ್ಯಮಿ ಡಿ.ಎಸ್.ಅರುಣ್‌ ಮೆಚ್ಚುಗೆ ವ್ಯಕ್ತಪಡಿಸಿದರು.
 
ಗೊಂದಲಕ್ಕೆ ಪರಿಹಾರ ಸೂಚನೆ: ನೋಟು ರದ್ದುಗೊಳಿಸಿದ ನಂತರ ಆರ್ಥಿಕ ವ್ಯವಸ್ಥೆಯ ಗೊಂದಲಕ್ಕೆ ಬಜೆಟ್‌ ಮೂಲಕ ಪರಿಹಾರ ಸೂಚಿಸಲಾಗಿದೆ.  ಹಲವೆಡೆ ನಗದುರಹಿತ ವ್ಯವಹಾರ ಕಡ್ಡಾಯಗೊಳಿಸಲಾಗಿದೆ. ಬಜೆಟ್‌ ಆರ್ಥಿಕ ಬೆಳವಣಿಗೆಗೆ ಆಶಾದಾಯಕವಾಗಿದೆ. ಕಪ್ಪು ಹಣ ಚಲಾವಣೆಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ವೇದಿಕೆಯ ಮುಖಂಡ ಎನ್.ಗೋಪಿನಾಥ್‌ ಸಂತಸ ವ್ಯಕ್ತಪಡಿಸಿದರು.
 
ಕೇಂದ್ರ ಬಜೆಟ್‌ ನೀರಸ: ಕೇಂದ್ರ ಬಜೆಟ್‌ಗೆ ರೈತ ಮುಖಂಡರು ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ.
 
ರೈತ ವಿರೋಧಿ ಬಜೆಟ್‌: ನೋಟು ರದ್ದತಿಯ ನಂತರ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಆದಾಯ ಹರಿದು ಬಂದಿದ್ದರೂ, ರೈತರ ಸಾಲ ಮನ್ನಾ ಮಾಡಿಲ್ಲ. ಬರಗಾಲದ ದವಡೆಗೆ ಸಿಲುಕಿರುವ ರೈತರ ನೆರವಿಗೆ ಕೇಂದ್ರ ಧಾವಿಸುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಕೃಷಿ ಉತ್ಪನ್ನಗಳ ಮೇಲೆ 0.01 ನಷ್ಟು ತೆರಿಗೆ ವಿಧಿಸಿರುವುದೂ ರೈತ ವಿರೋಧಿ ನಡೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌.ಆರ್.ಬಸವರಾಜಪ್ಪ ಟೀಕಿಸಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ವೈಜ್ಞಾನಿಕ ಬೆಲೆ ನಿಗದಿಯ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಬೆಳೆಯ ಮೇಲೆಯೇ ತೆರಿಗೆ ವಿಧಿಸುವ ಮೂಲಕ ರೈತ ವಿರೋಧಿ ನಿರ್ಧಾರ ಕೈಗೊಂಡಿದೆ ಎಂದು ರೈತ ಮುಖಂಡ ಕೆ.ವೈ.ಮಲ್ಲಿಕಾರ್ಜುನ ದೂರಿದ್ದಾರೆ. 
 
ನಿರಾಶಾದಾಯಕ ಬಜೆಟ್‌: ಪ್ರಧಾನಮಂತ್ರಿ ಮೋದಿ ಅವರು ಪ್ರತಿ ಮಾತಿಗೂ ‘ಆಮ್ ಆದ್ಮಿ’ ಎನ್ನುತ್ತಾರೆ. ಆದರೆ, ಈ ಬಜೆಟ್‌ ಜನಸಾಮಾನ್ಯರು, ಗ್ರಾಮೀಣ ಭಾಗದ ನಿವಾಸಿಗಳು, ಅಶಕ್ತರು, ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವಂತಹ ಯಾವುದೇ ಪ್ರಮುಖ ಪ್ರಸ್ತಾವ ಒಳಗೊಂಡಿಲ್ಲ. ಇದೊಂದು ನಿರಾಶಾದಾಯಕ, ಜನಸಾಮಾನ್ಯರ ವಿರೋಧಿ ಬಜೆಟ್. ನಗದು ರಹಿತ ವ್ಯವಹಾರ ಮಾಡಿ ಎಂದು ಹೇಳುವ ಪ್ರಧಾನಮಂತ್ರಿಗಳು, ಕೋಟ್ಯಂತರ ಕೂಲಿಕಾರ್ಮಿಕರು ಹಾಗೂ ಅನಕ್ಷರಸ್ಥರ ಬಳಿ ಇಂದಿಗೂ ಎಟಿಎಂ ಕಾರ್ಡ್‌ಗಳೇ ಇಲ್ಲ. ಪದವೀಧರ ಯುವಕರು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ. ಇವರಿಗೆ ಉದ್ಯೋಗ ಕಲ್ಪಿಸುವ, ಉದ್ಯೋಗ ಸೃಷ್ಟಿಯ ಯಾವುದೇ ಅಂಶಗಳು ಬಜೆಟ್‌ನಲ್ಲಿ ಇಲ್ಲ. ರಂಗುರಂಗಿನ ಘೋಷಣೆ ಮಾಡಿ, ನಾಗರಕರ ಹಾದಿ ತಪ್ಪಿಸುವ ತಂತ್ರ ಅಡಗಿದೆ ಎಂದು ಚುಂಚಾದ್ರಿ ವೇದಿಕೆ ಅಧ್ಯಕ್ಷೆ ಶಾಂತಾ ಸುರೇಂದ್ರ ಟೀಕಿಸಿದರು.
 
**
‘ಕುತೂಹಲವಿಲ್ಲದ ರೈಲ್ವೆ ಬಜೆಟ್‌’
ಇದೇ ಪ್ರಥಮಬಾರಿ ಕೇಂದ್ರ ಬಜೆಟ್‌ನಲ್ಲೇ ರೈಲ್ವೆ ಬಜೆಟ್‌ ಮಂಡಿಸಲಾಗಿದೆ. ಬಜೆಟ್‌ ಗಾತ್ರ 131 ಲಕ್ಷ ಕೋಟಿ. 3,500 ಕಿ.ಮೀ. ಹೊಸ ರೈಲು ಮಾರ್ಗ, ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳು, ನಿಲ್ದಾಣಗಳಲ್ಲಿ ಸೋಲಾರ್‌ ವ್ಯವಸ್ಥೆ,  ಬಯೋ ಶೌಚಾಲಯ ನಿರ್ಮಿಸಲು ಆದ್ಯತೆ ನೀಡಲಾಗಿದೆ. ಜಿಲ್ಲೆಗೆ ಈ ಹಿಂದೆ ಘೋಷಿಸಿದ ಮಾರ್ಗಗಳ ಮುಂದುವರಿಕೆಗೆ ಅವಕಾಶ ಕಲ್ಪಿಸಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.