ADVERTISEMENT

ತೀರ್ಥಹಳ್ಳಿ; ತುಂಬಿ ಹರಿದ ತುಂಗಾ ನದಿ

ಮಲೆನಾಡಿನಲ್ಲಿ ಮುಂದುವರಿದ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 5:29 IST
Last Updated 22 ಜುಲೈ 2014, 5:29 IST

ತೀರ್ಥಹಳ್ಳಿ: ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಜೂನ್‌ ತಿಂಗಳಲ್ಲಿ ಬರದ ಛಾಯೆಗೆ ತಳ್ಳಿದ್ದ ಮುಂಗಾರು ಮಳೆ ಜುಲೈನಲ್ಲಿ ಸುರಿಯುವ ಮೂಲಕ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಆಗುಂಬೆ ಭಾಗದ ಘಟ್ಟ ಪ್ರದೇಶ ಹಾಗೂ ಶೃಂಗೇರಿ ಸುತ್ತಮುತ್ತ ವಿಪರೀತ ಮಳೆಯಾಗುತ್ತಿರುವುದರಿಂದ ಜೀವನದಿ ತುಂಗೆ ತುಂಬಿ ಹರಿಯತ್ತಿದ್ದಾಳೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ಪುರಾಣ ಪ್ರಸಿದ್ಧ ತೀರ್ಥಹಳ್ಳಿ ರಾಮಮಂಟಪ ಮುಳುಗುವ ಸಾಧ್ಯತೆ ಇದೆ.

ಪ್ರತಿ ಮಳೆಗಾಲದಲ್ಲಿ ಎರಡರಿಂದ ಮೂರು ಬಾರಿ ತುಂಗಾನದಿ ತುಂಬಿ ಹರಿಯುವ ಮೂಲಕ ರಾಮಮಂಟಪ ಮುಳುಗಿಸಿ ನೆರೆ ತರುವುದು
ವಾಡಿಕೆ. ಆಗುಂಬೆ ಭಾಗದಲ್ಲಿನ ಮಳೆಯ ಆರ್ಭಟದಿಂದ ಮಾಲತಿ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ಭತ್ತದ ಗದ್ದೆಗಳು, ಅಡಿಕೆ
ತೋಟ ನೀರಿನಲ್ಲಿ ಮುಳುಗಿವೆ. ಮಳೆ ಹೆಚ್ಚಾಗಿದ್ದರಿಂದ ಕೆಲವು ರೈತರ ಭತ್ತದ ಗದ್ದೆಗಳಲ್ಲಿನ ಬದುಗಳು ಕೊಚ್ಚಿ ಹೋಗಿವೆ.

ನದಿಯ ನೀರು ಒಂದೇ ಸಮನೆ ಏರುತ್ತಲೇ ಇರುವುದರಿಂದಾಗಿ ಮಂಡಗದ್ದೆಯಲ್ಲಿ ರಾಷ್ಟ್ರೀಯ ಹೆದ್ದಾರಿ 13ರ ಶಿವಮೊಗ್ಗ–ಉಡುಪಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಕೆಲವು ವಾಹನಗಳು ಪರ್ಯಾಯ ಮಾರ್ಗವಾದ ಶಿವಮೊಗ್ಗ, ಆಯನೂರು, ಕನ್ನಂಗಿ, ತೀರ್ಥಹಳ್ಳಿ ಮೂಲಕ ಹಾದು ಹೋಗುತ್ತಿವೆ.

ನದಿಯ ನೀರಿನ ಹೆಚ್ಚಳದಿಂದಾಗಿ ಪಕ್ಷಿಗಳ ಗೂಡುಗಳಿಗೆ ಹಾನಿಯಾಗಿದೆ. ಆಗುಂಬೆ ಭಾಗ ಸೇರಿದಂತೆ ಗ್ರಾಮಾಂತರ ಪ್ರದೇಶದ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.   ಕುಶಾವತಿ ಹೊಳೆ, ಕುಂಟೇ ಹಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಆಗುಂಬೆಯಲ್ಲಿ 149 ಮಿ.ಮೀ. ತೀರ್ಥಹಳ್ಳಿಯಲ್ಲಿ 46.8 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಮಳೆ: ಶಾಲೆಗಳಿಗೆ ರಜೆ
ತಾಲ್ಲೂಕಿನಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ  ಕೆಲವು ಭಾಗಗಳಲ್ಲಿ ಶಾಲೆಗಳಿಗೆ ಸೋಮವಾರ ರಜೆ ನೀಡಲಾಗಿತ್ತು.
ಆಗುಂಬೆ ಭಾಗದ ಕೆಲವು ಶಾಲೆಗಳು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ರಜೆ ಕುರಿತ ಮಾಹಿತಿ ಇಲ್ಲದೇ ವಿದ್ಯಾರ್ಥಿಗಳು ಶಾಲೆಗೆ ತೆರಳಿ ಮತ್ತೆ ಮನೆಗಳಿಗೆ ವಾಪಾಸಾಗುತ್ತಿದ್ದ ದೃಶ್ಯ ಕಂಡುಬಂತು.

ಕ್ಷೇತ್ರ ಶಿಕ್ಷಣಾಧಿಕಾರಿ, ಸತತವಾಗಿ ಮಳೆ ಸುರಿಯುತ್ತಿದ್ದು, ಮಕ್ಕಳಿಗೆ ಶಾಲೆಗೆ ಬರಲು ತೊಂದರೆ ಆಗುತ್ತಿದ್ದರೆ ಆ ದಿನ ಶಾಲೆಗೆ ಸ್ಥಳೀಯವಾಗಿ ರಜೆಯನ್ನು ಮುಖ್ಯ ಶಿಕ್ಷಕರು, ಎಸ್‌ಡಿಎಂಸಿಯ ಅನುಮತಿ ಪಡೆದು ರಜೆ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಜೆ ನೀಡಿದ ದಿನಗಳಿಗೆ ಭಾನುವಾರದಂದು ಶಾಲೆ ನಡೆಸಿ ಸರಿದೂಗಿಸುವಂತೆ ಅವರು ತಿಳಿಸಿದ್ದಾರೆ. ಮಳೆಗಾಲಕ್ಕೆ ಮಾತ್ರ ಇಂಥಹ ರಜೆಗಳು ಅನ್ವಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.