ADVERTISEMENT

ತೊಗರಿಬೇಳೆ ವಿತರಣೆಗೆ ಕ್ರಮ: ಕಾಗೋಡು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 5:58 IST
Last Updated 7 ಏಪ್ರಿಲ್ 2017, 5:58 IST

ಶಿವಮೊಗ್ಗ: ‘ಅನ್ನಭಾಗ್ಯ ಯೋಜನೆಯಡಿ ಮುಂದಿನ ತಿಂಗಳಿನ ಪಡಿತರದಲ್ಲಿ ತೊಗರಿಬೇಳೆ ವಿತರಿಸುವ ನಿರ್ಧಾರ ಕೈಗೊಂಡಿದ್ದು, ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಿದ್ದ ಹೆಚ್ಚುವರಿ ಅಕ್ಕಿ ವಿತರಣೆ ಹಾಗೂ ಜಾಗೃತ ಸಮಿತಿ ಸದಸ್ಯರಿಗೆ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಜಾತಿ, ಮತ, ಪಂಥ ಎನ್ನದೆ ರಾಜ್ಯವನ್ನು ಹಸಿವು ಮುಕ್ತ ವನ್ನಾಗಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಬಡಜನರು ಹಸಿವಿನಿಂದ ಇರಬಾರದು ಎಂಬ ಕಳಕಳಿ ಈ ಯೋಜನೆಯಲ್ಲಿ ಅಡಗಿದೆ’ ಎಂದರು.

ADVERTISEMENT

‘ಪ್ರತಿಯೊಬ್ಬರೂ ಸಂತೃಪ್ತ ಹಾಗೂ ನೆಮ್ಮದಿ ಜೀವನ ನಡೆಸಲು ಅನುಷ್ಠಾನಕ್ಕೆ ತರಲಾದ ‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳು ಅಕ್ಕಿಯನ್ನು ಕೃತಜ್ಞತಾ ಮನೋಭಾವದಿಂದ ಸ್ವೀಕರಿಸಬೇಕು. ಯೋಜನೆ ದುರುಪಯೋಗ ವಾಗುವುದಕ್ಕೆ ಯಾವುದೇ ಅವಕಾಶ ನೀಡಬಾರದು’ ಎಂದು ಸಲಹೆ ನೀಡಿದರು.

‘ಆರೋಗ್ಯವಂತ ಸಮಾಜ ನಿರ್ಮಾಣದ ಸದುದ್ದೇಶದಿಂದ ಜಿಲ್ಲೆಯ ಎಲ್ಲಾ ಬಿಪಿಎಲ್ ಕುಟುಂಬಗಳ ತಲಾ ಒಬ್ಬರಿಗೆ ಈ ಹಿಂದೆ ನೀಡಲಾಗುತ್ತಿದ್ದ 5 ಕೆ.ಜಿ.ಅಕ್ಕಿ ಬದಲಾಗಿ 7 ಕೆ.ಜಿ.ಅಕ್ಕಿಯನ್ನು ಪ್ರಸಕ್ತ ತಿಂಗಳಿನಿಂದಲೇ ಉಚಿತವಾಗಿ ವಿತರಿಸಲಾಗುತ್ತಿದೆ. ಕೇಂದ್ರದ ಆಹಾರ ಭದ್ರತಾ ಯೋಜನೆಯಡಿ ಅನ್ನಭಾಗ್ಯ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ’ ಎಂದು ತಿಳಿಸಿದರು.

‘ಅನ್ನಭಾಗ್ಯ ಯೋಜನೆ ಬಗ್ಗೆ ಇತರೆ ರಾಜಕಾರಣಿಗಳು ಏನೂ ಹೇಳಿದರೂ ಕೇಳಬೇಡಿ. ಸಿದ್ದರಾಮಯ್ಯ ಸರ್ಕಾರದ ಯೋಜನೆಗಳ ಮೇಲೆ ಸಂಪೂರ್ಣ ನಂಬಿಕೆ ಇರಲಿ. ಫಲಾನುಭವಿಗಳೆಲ್ಲರೂ ಕಾಂಗ್ರೆಸ್ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಋಣಿಯಾಗಿರಬೇಕು’  ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಪ್ರಾಸ್ತಾವಿಕ ಮಾತನಾಡಿ, ‘ಎಲ್ಲಾ ಪಡಿತರ ಚೀಟಿಗಳೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕಾರ್ಯ ಬಹುತೇಕ ಮುಕ್ತಾಯವಾಗಿದೆ. ಮರಣ ಹೊಂದಿದವರ,  ವಲಸೆ ಹೋದವರ  ಪಡಿತರ ಚೀಟಿಯನ್ನು ರದ್ದು ಮಾಡುವ ಕಾರ್ಯ ಸದ್ಯ ಪ್ರಗತಿಯಲ್ಲಿದೆ’  ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಯಡಿ ವಿತರಿಸಲಾಗುತ್ತಿರುವ ಪಡಿತರ ಆಹಾರ ಧಾನ್ಯಗಳಲ್ಲಿ ಯಾವುದೇ ನ್ಯೂನತೆ ಆಗದಂತೆ ಖುದ್ದಾಗಿ ಗಮನ ಹರಿಸಲಾಗುವುದು. ಪ್ರತಿ ಪಡಿತರ ಕೇಂದ್ರದ ಜಾಗೃತ ಸಮಿತಿ ಸದಸ್ಯರು ಈ ಯೋಜನೆಯನ್ನು ಕರಾರುವಾಕ್ಕಾಗಿ ಅನುಷ್ಠಾನ ಗೊಳಿಸುವಲ್ಲಿ ಗಮನಹರಿಸಬೇಕು’ ಎಂದರು.

‘ಜಾಗೃತ ಸಮಿತಿ ಸದಸ್ಯರು ಪ್ರತಿ ತಿಂಗಳಿನ ಪಡಿತರ ವಿತರಣೆ, ಆಹಾರದ ಗುಣಮಟ್ಟ, ಹಣ ಪಾವತಿ  ಮೇಲೆ ವಿಶೇಷ ಗಮನವಿಡಬೇಕು’ ಎಂದರು.

ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ 7 ಕೆ.ಜಿ. ಪಡಿತರ ಅಕ್ಕಿ ವಿತರಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮೇಯರ್ ಏಳುಮಲೈ ಬಾಬು, ಉಪಮೇಯರ್ ರೂಪಾ ಎಸ್.ಲಕ್ಷ್ಮಣ್, ತಹಶೀಲ್ದಾರ್ ಕೇಶವಮೂರ್ತಿ, ಆಹಾರ ಇಲಾಖೆಯ ಉಪನಿರ್ದೇಶಕ ಟಿ.ಕೆ. ಲಕ್ಷ್ಮೀನಾರಾ ಯಣರೆಡ್ಡಿ  ಉಪಸ್ಥಿತರಿದ್ದರು.

**

‘ತಾಲ್ಲೂಕು ರಚನೆಗೆ ಶಾಸನಸಭೆಯಲ್ಲಿ ಒಪ್ಪಿಗೆ’

ಶಿವಮೊಗ್ಗ: ಶೀಘ್ರದಲ್ಲಿಯೇ ತಾಲ್ಲೂಕು ರಚನೆ ಸಂಬಂಧ ಸರ್ಕಾರದ ಆದೇಶ ಹೊರಬೀಳಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ತಾಲ್ಲೂಕು ರಚನೆಗೆ ಶಾಸನಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಹೊಸ ತಾಲ್ಲೂಕು ರಚನೆಯಲ್ಲಿ ನ್ಯಾಮತಿ ಸೇರ್ಪಡೆಗೊಂಡಿದೆ. ನೂತನ ನ್ಯಾಮತಿ ತಾಲ್ಲೂಕಿಗೆ ಶಿವಮೊಗ್ಗ ತಾಲ್ಲೂಕಿನ ಗ್ರಾಮಗಳ ಸೇರ್ಪಡೆ ಕುರಿತು ಯಾವುದೇ ನಿರ್ಧಾರವಿಲ್ಲ. ಈ ಕುರಿತು ಜಿಲ್ಲಾಧಿಕಾರಿಯಿಂದ ವರದಿ ಪಡೆದುಕೊಳ್ಳುವುದಾಗಿ ತಿಳಿಸಿದರು.

ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ಸಚಿವರೊಂದಿಗೆ ಸಭೆ ನಡೆಸಲಾಗಿದೆ. ಅರಣ್ಯ ವಲಯವನ್ನು ಮಾತ್ರ ಪಶ್ಚಿಮಘಟ್ಟ ಪ್ರದೇಶಕ್ಕೆ ಸೇರಿಸಬೇಕು ಹಾಗೂ ನಿರ್ಬಂಧಿತ ಪ್ರದೇಶ (ಬಫರ್ ಜೋನ್)ವನ್ನು ತೆಗೆದುಹಾಕಬೇಕೆಂದು ಚರ್ಚೆ ನಡೆಸಲಾಗಿದೆ. ಈ ಕುರಿತಂತೆ ಸರ್ಕಾರ ಸದ್ಯದಲ್ಲಿಯೇ ಆಕ್ಷೇಪಣೆ ಸಲ್ಲಿಸಲಿದೆ ಎಂದರು.

ಮಾಧ್ಯಮಕ್ಕೆ ನಿಯಂತ್ರಣ ವಿಧಿಸುವ ಕುರಿತು ಶಾಸನಸಭೆಯಲ್ಲಿ ಚರ್ಚೆಯಾಗಿದೆಯೇ ವಿನಾ ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಮಾಧ್ಯಮ ಹಾಗೂ ಶಾಸಕಾಂಗ ಒಳ್ಳೆಯ ಸಾಮರಸ್ಯ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿದ 12 ಲಕ್ಷ ರೈತರಿಗೆ ಈಗಾಗಲೇ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನು 15 ಲಕ್ಷ ರೈತರಿಗೆ ಬೆಳೆ ಪರಿಹಾರ ನೀಡಬೇಕಿದೆ. ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಯಾದ ಕೂಡಲೇ ವಿತರಣೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.