ADVERTISEMENT

ತ್ಯಾಗರ್ತಿ ಗ್ರಾ. ಪಂನಲ್ಲಿ ಭ್ರಷ್ಟಾಚಾರ: ದೂರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:17 IST
Last Updated 14 ಏಪ್ರಿಲ್ 2017, 5:17 IST

ಸಾಗರ: ‘ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷ ಹಮೀದ್‌ಖಾನ್‌ ಅವರಿಂದ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ’ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಟಿ.ಕೆ.ಹನುಮಂತಪ್ಪ ಆರೋಪಿಸಿದರು.

ತ್ಯಾಗರ್ತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಜಿಲ್ಲಾ ಪಂಚಾಯ್ತಿ ತನಿಖೆ ನಡೆಸಿದ್ದು, ₹10 ಲಕ್ಷ ಮೊತ್ತದ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.  ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಹಮೀದ್‌ ಖಾನ್‌ ಅವರು ರಾಜೀನಾಮೆ ನೀಡಬೇಕು’ ಎಂದು ಗುರುವಾ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ತನಿಖೆ ನಡೆಸುವಂತೆ ಗ್ರಾಮಸ್ಥರು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆ ಯಲ್ಲಿ ನಡೆದ ತನಿಖೆಯಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿರುವುದು ಗೊತ್ತಾಗಿದೆ’ ಎಂದು ತಿಳಿಸಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ ಹಮೀದ್‌ಖಾನ್‌  ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಹಣ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.   ವಿವಿಧ  ಹರಾಜು ಪ್ರಕ್ರಿಯೆಯಲ್ಲಿ ಪಂಚಾಯ್ತಿಗೆ ಸಂಬಂಧಪಟ್ಟ ಹಣವನ್ನು ಸಕಾಲದಲ್ಲಿ ಬ್ಯಾಂಕ್‌ ಖಾತೆಗೆ ಜಮಾ ಮಾಡಿರಲಿಲ್ಲ. ಗ್ರಾಮಸ್ಥರ ವಿರೋಧದ ನಂತರ ಜಮಾ ಮಾಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲಾ ಪಂಚಾಯ್ತಿ ನಡೆಸಿರುವ ತನಿಖೆಯಿಂದ ಆತ  ಹಲವು  ಅಕ್ರಮಗಳನ್ನು ನಡೆಸಿರುವುದು ಗೊತ್ತಾಗಿದ್ದರೂ ಅವರ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ವಿರೋಧಿಸಿ ಏ.17ರಂದು ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ  ಶ್ರೀನಿವಾಸ್‌ ಮಾತನಾಡಿ, ‘ಅವ್ಯವಹಾರಗಳ ಬಗ್ಗೆ ಗ್ರಾಮಸ್ಥರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತಂದಿದ್ದರೂ ಅವರು ಮೌನ ವಹಿಸಿದ್ದಾರೆ.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಹಮೀದ್‌ಖಾನ್‌ ಅವರು ಸಚಿವರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ವರ್ಗಾವಣೆ ಆಗುವಂತೆ ನೋಡಿ ಕೊಂಡಿದ್ದಾರೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ  ಪರಶು ರಾಮ್‌, ನಾಗರಾಜ್‌, ಕರಿಯಪ್ಪ, ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT