ADVERTISEMENT

ದೇಶಕ್ಕೆ ಆಹಾರ ನೀಡುವ ರೈತನಿಗೇ ಭದ್ರತೆಯಿಲ್ಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 9:14 IST
Last Updated 12 ಸೆಪ್ಟೆಂಬರ್ 2017, 9:14 IST

ಶಿಕಾರಿಪುರ: ‘ದೇಶದ ಜನರಿಗೆ ಆಹಾರ ಭದ್ರತೆ ಯೋಜನೆ ನೀಡುವ ಸರ್ಕಾರಗಳು ಆಹಾರ ಉತ್ಪನ್ನ ಬೆಳೆಯುವ ರೈತನಿಗೇ ಭದ್ರತೆ ನೀಡುತ್ತಿಲ್ಲ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ. ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.

ಏತ ನೀರಾವರಿ ಯೋಜನೆಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ನೇತೃತ್ವದಲ್ಲಿ ತಾಳಗುಂದ ಹಾಗೂ ಉಡುಗಣಿ ಹೋಬಳಿ ಗ್ರಾಮಗಳ ರೈತರು ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ನಡೆಸಿದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಆಳುವ ಸರ್ಕಾರಗಳು ಉದ್ಯಮಿ ಗಳಿಗೆ ಅನುಕೂಲ ಮಾಡುವ ಬದಲು ದೇಶದ ಅಭಿವೃದ್ಧಿಗೆ ಕಾರಣರಾದ ರೈತರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತರಬೇಕು. ಜಾರಿಗೆ ತರುವ ಯೋಜನೆಗಳು ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ, ರೈತರಿಗೆ ತಲುಪಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಬರಗಾಲ ಆವರಿಸಿರುವುದರಿಂದ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ತಾಲ್ಲೂಕಿನ ತಾಳಗುಂದ ಉಡುಗಣಿ ಹೋಬಳಿಗಳ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಏತನೀರಾವರಿ ಯೋಜನೆ ಅನುಷ್ಠಾನ ಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳೆ ವಿಮೆ ತಾಳಗುಂದ ಹಾಗೂ ಉಡುಗಣಿ ಹೋಬಳಿ ಭಾಗದ ರೈತರಿಗೆ ಲಭಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಬೆಳೆವಿಮೆ ಅವರ ಪಕ್ಷದ ಸಂಸದರಾಗಿರುವ ಬಿ.ಎಸ್‌.ಯಡಿಯೂರಪ್ಪ ಕ್ಷೇತ್ರದಲ್ಲಿಯೇ ಸಮರ್ಪಕವಾಗಿ ರೈತರಿಗೆ ದೊರೆತಿಲ್ಲ. ಬೆಳೆ ವಿಮೆ ಕೊಡಿಸುವ ಬಗ್ಗೆ ಯಡಿಯೂರಪ್ಪ ಆಸಕ್ತಿ ತೋರಬೇಕು’ ಎಂದು ಸಲಹೆ ನೀಡಿದರು.
‘ಸಚಿವ ರಮೇಶ್‌ ಕುಮಾರ್ ಅವರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಕಟ್ಟಬೇಡಿ ಎಂದು ಹೇಳಿಕೆ ನೀಡಿದ್ದಾರೆ. ಅದರಂತೆ ರೈತರು ಸಾಲ ಪಾವತಿ ಮಾಡಬೇಡಿ. ಬ್ಯಾಂಕ್‌ ಸಿಬ್ಬಂದಿ ನೋಟಿಸ್‌ ನೀಡಲು ಬಂದರೆ ರಮೇಶ್‌ಕುಮಾರ್‌ಗೆ ನೀಡುವಂತೆ ತಿಳಿಸಿ’ ಎಂದು ಅವರು ನೀಡಿದರು.


ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ಜಯಪ್ಪಗೌಡ್ರು, ಪ್ರೇಮಾ ಉಮೇಶ್‌, ಪ್ಯಾಟೆ ಈರಣ್ಣ, ಮುಗಳಿಕೊಪ್ಪ ರಾಜಣ್ಣ, ಕೋಟ್ರೇಶಪ್ಪ, ಶಿವಯೋಗಪ್ಪ, ಶಿವಾನಂದಪ್ಪ, ಬಸವನಗೌಡ, ಸುವರ್ಣ ಕರ್ನಾಟಕ ಪದಾಧಿಕಾರಿಗಳಾದ ನೂರ್‌ಅಹಮದ್, ವಿಜಯ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.