ADVERTISEMENT

ಧಾಮದಲ್ಲೇ ಸಿಂಹಗಳ ಸಂತಾನೋತ್ಪತ್ತಿ ನಿರೀಕ್ಷೆ!

ಚಂದ್ರಹಾಸ ಹಿರೇಮಳಲಿ
Published 17 ನವೆಂಬರ್ 2017, 6:20 IST
Last Updated 17 ನವೆಂಬರ್ 2017, 6:20 IST
ಸಿಶ್ಮಿತಾ
ಸಿಶ್ಮಿತಾ   

ಶಿವಮೊಗ್ಗ: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಿಂದ ಬಂದಿರುವ ಸರ್ವೇಶ್ ಹಾಗೂ ಸುಶ್ಮಿತಾ ಒಟ್ಟಿಗೆ ಸೇರಲು ವನ್ಯಜೀವಿ ವಿಭಾಗದ ಅಧಿಕಾರಿಗಳು ಹಸಿರು ನಿಶಾನೆ ತೋರಿದ್ದು, ದಶಕಗಳ ನಂತರ ತ್ಯಾವರೆಕೊಪ್ಪ ಧಾಮದಲ್ಲೇ ಸಿಂಹಗಳ ಸಂತಾನೋತ್ಪತ್ತಿಯ ನಿರೀಕ್ಷೆ ಗರಿಗೆದರಿದೆ.

ಎರಡನ್ನೂ ಸದ್ಯ ಅಕ್ಕಪಕ್ಕದ ಪ್ರತ್ಯೇಕ ಸಂರಕ್ಷಣಾ ಆವರಣದಲ್ಲಿ ಇಡಲಾಗಿದೆ. ಪರಸ್ಪರ ಹೊಂದಾಣಿಕೆ ಕಾಣುತ್ತಿದ್ದು, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ವಾತಾವರಣಕ್ಕೂ ಹೊಂದಿಕೊಳ್ಳುತ್ತಿವೆ. ಸಂರಕ್ಷಣಾ ಆವರಣದ ಎದುರಲ್ಲೇ ಧಾಮದ ಸಿಂಹಗಳಾದ ಆರ್ಯ ಮತ್ತು ಮಾನ್ಯರನ್ನೂ ಬಿಡಲಾಗಿದ್ದು, ನಾಲ್ಕು ಸಿಂಹಗಳು ಪರಸ್ಪರ ಗುರುತಿಸಲು ಅನುಕೂಲವಾಗಿದೆ.

ಐದು ವರ್ಷದ ಸುಶ್ಮಿತಾ, ಅಷ್ಟೇ ವಯೋಮಾನದ ಸರ್ವೇಶ್ ಬನ್ನೇರುಘಟ್ಟದಲ್ಲಿ ಜನಿಸಿದ್ದರೂ  ಎಂದೂ ಒಟ್ಟಿಗೆ ವಾಸಿಸಿಲ್ಲ. ಎರಡರ ತಾಯಿಯೂ ಬೇರೆ. ಸುಶ್ಮಿತಾ ಸಫಾರಿಯಲ್ಲಿ ಇದ್ದರೆ, ಸರ್ವೇಶ್ ಪ್ರಾಣಿಗಳ ಹಾರೈಕೆ ಕೇಂದ್ರದಲ್ಲಿ ಇತ್ತು. ಆದರೆ, ಎರಡೂ ಜನಿಸಿದ್ದು ಒಂದೇ ವರ್ಷ. ಹಾಗಾಗಿ, ಎರಡೂ ಮೊದಲು ಹೊಂದಿಕೊಳ್ಳಲು ಅಗತ್ಯ ವಾತಾವರಣ ಕಲ್ಪಿಸಲಾಗಿದೆ.

ADVERTISEMENT

‘ಸದ್ಯ ಧಾಮದಲ್ಲಿ ಇರುವುದು ಎರಡೂ ಇಂಡೋ–ಆಫ್ರಿಕನ್ ತಳಿಯ ಸಿಂಹಗಳು. ಈಗ ಬನ್ನೇರುಘಟ್ಟದಿಂದ ಬಂದಿರುವ ಸಿಂಹಗಳು ಏಷ್ಯನ್ ತಳಿ. ಧಾಮದಲ್ಲೇ ಹಟ್ಟಿದ ಮಾನ್ಯಗೆ ಈಗ 7 ವರ್ಷ. ಮಾನ್ಯ ತಂದೆ ಆರ್ಯಗೆ 13 ವರ್ಷ. ಸಿಂಹಗಳ ಸರಾಸರಿ ಆಯಸ್ಸು18ರಿಂದ 20 ವರ್ಷ. ಆರ್ಯನ ಲೈಂಗಿಕ ಸಾಮರ್ಥ್ಯ ಕ್ಷೀಣಿಸಿದೆ. ಹಾಗಾಗಿ, ಸರ್ವೇಶ್ ಜತೆಗೆ ಮಾನ್ಯ ಹಾಗೂ ಸುಶ್ಮಿತಾ ಇಬ್ಬರನ್ನೂ ಬಿಡಲಾಗುವುದು. ಮಾರ್ಚ್, ಏಪ್ರಿಲ್‌ ವೇಳೆಗೆ ಇಬ್ಬರೂ ಗರ್ಭ ಧರಿಸಬಹುದು ಎಂಬ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಲುವರಾಜ್.

ಒಂದು ದಿನದ ಪ್ರಯಾಣದ ನಂತರ ನವೆಂಬರ್ 11ರಂದು ಎರಡೂ ಸಿಂಹಗಳು ಇಲ್ಲಿಗೆ ತಲುಪಿವೆ. ಪ್ರಯಾಣದ ಆಯಾಸದ ಕಾರಣ ನಾಲ್ಕು ದಿನ ವಿಶ್ರಾಂತಿ ಪಡೆದಿವೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ಅಗತ್ಯ ಪ್ರಮಾಣದ ಮಾಂಸ ಸೇವಿಸುತ್ತಿವೆ. ಆರೋಗ್ಯವಾಗಿವೆ ಎಂದು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ. ವಿನಯ್‌ಕುಮಾರ್ ಮಾಹಿತಿ ನೀಡಿದರು.

ಧಾಮದಲ್ಲಿ 28 ವಿವಿಧ ಬಗೆಯ ವನ್ಯಜೀವಿಗಳು ಸೇರಿದಂತೆ ಒಟ್ಟು 332 ಪ್ರಾಣಿ, ಪಕ್ಷಿಗಳು ಇವೆ. ವರ್ಷಕ್ಕೆ ಸರಾಸರಿ 2.5 ಲಕ್ಷ ಜನರು ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ 1.77 ಕೋಟಿ ಸಂಗ್ರಹವಾಗಿತ್ತು. ಆದರೆ, ನಿರ್ವಹಣೆಯ ಖರ್ಚು ₹ 2.80 ಕೋಟಿ ತಲುಪಿತ್ತು. ಈ ಬಾರಿ ಆದಾಯ ₹ 2 ಕೋಟು ದಾಟಲಿದೆ ಎಂದು ಅಧಿಕಾರಿಗಳು ವಿವರ ನೀಡಿದರು.

ಮಹಾ ಯೋಜನೆ’ ಪ್ರಸ್ತಾವ ಸಲ್ಲಿಕೆ
ಮೈಸೂರು ಪ್ರಾಣಿ ಸಂಗ್ರಹಾಲಯದ ಮಾದರಿಯಲ್ಲಿ ಹುಲಿ–ಸಿಂಹಧಾಮ ಮೇಲ್ದರ್ಜೆಗೇರಿಸಲು ಅನುಮತಿ ಕೋರಿ ಶಿವಮೊಗ್ಗ ವನ್ಯಜೀವಿ ವಿಭಾಗದ ಅಧಿಕಾರಿಗಳು ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರಕ್ಕೆ ‘ಮಹಾ ಯೋಜನೆ’ ಪ್ರಸ್ತಾವ ಸಲ್ಲಿಸಿದ್ದಾರೆ.

250 ಹೆಕ್ಟೇರ್ ವಿಶಾಲ ಪ್ರದೇಶದಲ್ಲಿ ಪ್ರಸ್ತುತ ಸ್ವಲ್ಪ ಭಾಗ ಮಾತ್ರ ಬಳಸಿಕೊಳ್ಳಲಾಗಿದೆ. ಇಷ್ಟೊಂದು ವಿಶಾಲ ಪ್ರದೇಶ ರಾಜ್ಯದ ಯಾವ ಭಾಗದಲ್ಲೂ ಇಲ್ಲ. ಧಾಮದಲ್ಲಿ ಇರುವ 28 ಚಿರತೆಗಳಲ್ಲಿ 18 ಚಿರತೆ ಹೊರಗೆ ಕಳುಹಿಸಲಾಗುತ್ತಿದೆ. ಉಳಿದ ನಾಲ್ಕು ದೊಡ್ಡ ಹಾಗೂ 6 ಮರಿಚಿರತೆಗಳಿಗೆ ದೊಡ್ಡ ಸಂರಕ್ಷಣಾ ಆವರಣ ನಿರ್ಮಿಸಲಾಗುತ್ತಿದೆ.

ಹೊಸದಾಗಿ ಎರಡು ಕಾಡೆಮ್ಮೆ ತರಿಸಲಾಗುವುದು ಮುಕ್ತ ವಾತಾವರಣದಲ್ಲಿ ಬಿಟ್ಟು ಸುತ್ತಲೂ ಕಂದಕ ನಿರ್ಮಿಸಲಾಗುವುದು. ಪಕ್ಷಿಗಳಿಗೆ ಈಗಿರುವ ಒಂದು ಎಕರೆ ವಿಸ್ತರಿಸಿ ಎರಡೂವರೆ ಎಕರೆ ಜಾಗ ಮೀಸಲಿಡಲಾಗುವುದು. ಮೊಸಳೆಗಳ ಜಾಗವನ್ನೂ ವಿಸ್ತರಿಸಲಾಗುವುದು. ತೂಗು ಸೇತುವೆ ಮೇಲಿನಿಂದ ನಿಂತು ಮೊಸಳೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಎಲ್ಲ ಜಾತಿಯ ಹಾವುಗಳು ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಚಲುವರಾಜ್‌ ವಿವರ ನೀಡಿದರು.

ಪ್ರತ್ಯೇಕ ಮ್ಯೂಸಿಯಂ, ಗಾಯಗೊಂಡ ಪ್ರಾಣಿಗಳ ಚಿಕಿತ್ಸಾ ಕೇಂದ್ರ, ಆಧುನಿಕ ಚಿಕಿತ್ಸಾ ಸೌಲಭ್ಯದ ವನ್ಯಜೀವಿ ಆಸ್ಪತ್ರೆ ನಿರ್ಮಿಸಲಾಗುತ್ತದೆ. ವಿನ್ಯಾಸಕಾರ ಮನೋಜ್ ರೂಪುರೇಷೆ ಸಿದ್ಧಪಡಿಸಿದ್ದಾರೆ. ಅಂದಾಜು ₹ 10 ಕೋಟಿ ವೆಚ್ಚ ತಗುಲುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.